

ಮಡಿಕೇರಿ: ಕಟ್ಟಡ ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ಗೋವಿಂದದಾಸ್ ಮಾತನಾಡಿ, ಪರಿಷ್ಕೃತಗೊಂಡಿರುವ ಪಿಂಚಣಿ, ಮದುವೆ, ಹಾಗೂ ಹೆರಿಗೆ ಸಹಾಯಧನವನ್ನು ಕೂಡಲೇ ಜಾರಿಗೊಳಿಸಬೇಕು. ಅರ್ಜಿಗಳನ್ನು ಕೂಡಲೇ ಇತ್ಯರ್ಥಗೊಳಿಸಲು ಅಗತ್ಯ ಕ್ರಮವಹಿಸಬೇಕು. ವಿದ್ಯಾರ್ಥಿ ವೇತನ ಅರ್ಜಿಗಳನ್ನು ವಿಳಂಬವಿಲ್ಲದೆ ಸಲ್ಲಿಸಲು ಆನ್ಲೈನ್ ವ್ಯವಸ್ಥೆ, ಸರಿಪಡಿಸಬೇಕು. ಕಾರ್ಮಿಕ ಅಧಿಕಾರಿ ಮತ್ತು ಕಾರ್ಮಿಕ ನಿರಿಕ್ಷಕರ ಕಛೇರಿಗಳಲ್ಲಿರುವ ಅರ್ಜಿಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಬೇಕು. ನೋಂದಾಯಿತ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಭವಿಷ್ಯನಿಧಿ ಜಾರಿಗೊಳಿಸಲು ಕೂಡಲೇ ಕ್ರಮವಹಿಸಬೇಕು. ದಿನಬಳಕೆಯ ಅಗತ್ಯ ವಸ್ತುಗಳ ಬೆಲೆ ಹಾಗು ಕಟ್ಟಡ ನಿರ್ಮಾಣ ಸಾಮಗ್ರಿಗಳ ಬೆಲೆ ನಿಯಂತ್ರಣ ಮಾಡಬೇಕು. ಬಿಲ್ಡರ್‌ಗಳಿಂದ ಸಣ್ಣ ಗುತ್ತಿಗೆದಾರ ಮೇಸ್ತ್ರಿಗಳಿಗೆ ಆಗುತ್ತಿರುವ ಹಣಕಾಸಿನ ವಂಚನೆ ಹಾಗೂ ಕಾರ್ಮಿಕರಿಗೆ ಅಗುತ್ತಿರುವ ಕೂಲಿ ವಂಚನೆ ತಡೆಗಟ್ಟಲು ವಿಶೇಷ ಕಾನೂನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಕೆಪಿಸಿಸಿ ಕಾನೂನು ಘಟಕದ ರಾಜ್ಯಾಧ್ಯಕ್ಷ ಎ.ಎಸ್.ಪೊನ್ನಣ್ಣ, ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಆರ್.ದಿನೇಶ್, ಘಟಕದ ಮಡಿಕೇರಿ ಬ್ಲಾಕ್ ಅಧ್ಯಕ್ಷ ಫಯಾಜ್ಹ್, ಉಪಾಧ್ಯಕ್ಷ ನಾಗರಾಜ್, ಕಾರ್ಯದರ್ಶಿ ಅನಿಲ್, ನಗರಸಭೆ ಸದಸ್ಯ ರಾಜೇಶ್ ಯಲ್ಲಪ್ಪ, ಪ್ರಮುಖರಾದ ಪ್ರಕಾಶ್ ಆಚಾರ್ಯ, ಸೂರಜ್ ಹೊಸೂರು ಇತರರಿದ್ದರು.