

ಕೊಳ್ಳೇಗಾಲ: ಸಮರ್ಪಕ ವಿದ್ಯುತ್ ಪೂರೈಕೆ ಹಾಗೂ ಟಿಸಿ ವಿತರಣೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಸೆಸ್ಕ್ ಉಪವಿಭಾಗ ಕಚೇರಿ ಮುಂಭಾಗ ಗುರುವಾರ ಪ್ರತಿಭಟನೆ ನಡೆಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಸೋಮಣ್ಣ ಮಾತನಾಡಿ, ಕಾಡಂಚಿನ ಪ್ರದೇಶದ ರೈತರು ಹಾಗೂ ತೋಟದ ಮನೆಯಲ್ಲಿ ವಾಸಿಸುವ ರೈತ ಕುಟುಂಬಕ್ಕೆ ವಿದ್ಯುತ್ ಸಮಸ್ಯೆ ಹೆಚ್ಚಾಗಿದೆ. ಮಕ್ಕಳು ಓದಲು ಸಾಧ್ಯವಾಗುತ್ತಿಲ್ಲ. ಸರ್ಕಾರ 7 ಗಂಟೆ ಕರೆಂಟ್ ನೀಡುವಂತೆ ಘೋಷಣೆ ಮಾಡುತ್ತದೆ. ಆದರೆ, ಸೆಸ್ಕ್ 7 ಗಂಟೆಯಲ್ಲಿ ಎರಡ್ಮೂರು ಗಂಟೆ ಕತ್ತರಿಸಿ ನೀಡುತ್ತಿದೆ. ಕೇಳಿದರೆ ನಾನಾ ಕಾರಣ ಹೇಳುತ್ತಾರೆ. ನಂತರ ಅದನ್ನು ಸರಿದೂಗಿಸುವ ಕೆಲಸವನ್ನು ಮಾಡುವುದಿಲ್ಲ ಎಂದು ಆರೋಪಿಸಿದರು.
ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಜತೆಗೆ ಮೈಕ್ರೋ ಫೈನಾನ್ಸ್ ಕಿರುಕುಳ, ಬ್ಯಾಂಕ್‌ಗಳು ಕೂಡ ನೋಟಿಸ್ ನೀಡುತ್ತಿದ್ದು, ರೈತರು ಬೇಸತ್ತಿದ್ದಾರೆ ಎಂದರು.
ಸರಿಯಾದ ರೀತಿಯಲ್ಲಿ ವಿದ್ಯುತ್ ಪೂರೈಕೆ ಮಾಡದೆ ನೀರಿನ ಸಮಸ್ಯೆ ಏರ್ಪಟ್ಟಿದೆ. ರೈತರು ಬೆಳೆಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ರೈತ ಮುಖಂಡ ನಾಗರಾಜು ಟಿಸಿ ಹಾಕಿಕೊಡಲು ಮನವಿ ಮಾಡಿ ವಾರ ಕಳೆದರೂ ಅಧಿಕಾರಿಗಳು ಕ್ರಮವಹಿಸಿಲ್ಲ. ಶಿವಕಳ್ಳಿ ಫೀಡರ್, ಒಡಗೆರೆ ಫೀಡರ್, ಕೊಳ್ಳೇಗಾಲ ಹಾಗೂ ಹನೂರು ತಾಲೂಕು ವ್ಯಾಪ್ತಿಯಲ್ಲಿ ವಿದ್ಯುತ್ ಸಮಸ್ಯೆಯಾಗಿದ್ದು, ಬಗೆಹರಿಸುವಂತೆ ಒತ್ತಾಯಿಸಿದರು.
ರೈತ ಸಂಘದ ಯಳಂದೂರು ತಾಲೂಕು ಅಧ್ಯಕ್ಷ ನಾಗರಾಜು ಮಾತನಾಡಿ, ನನ್ನ ಜಮೀನಿನ ಟಿಸಿ ಸುಟ್ಟು ಹೋಗಿ 7 ದಿನಗಳಾಗಿವೆ. ಸರಿಪಡಿಸುವಂತೆ ಮನವಿ ಮಾಡಿ ಕಚೇರಿಗಳಿಗೆ ಅಲೆದರೂ ಪ್ರಯೋಜನವಾಗಿಲ್ಲ ಎಂದರು.
ಸ್ಥಳಕ್ಕೆ ಸೆಸ್ಕ್ ಇಇ ತಬಸ್ಸು ಅಪ್ಜಾ, ಎಇಇ ರಾಜು ಸ್ಥಳಕ್ಕೆ ಭೇಟಿ ನೀಡಿ ರೈತರ ಅಹವಾಲು ಆಲಿಸಿದರು. ಸೆಸ್ಕ್ ಇಇ ತಬಸ್ಸು ಅಪ್ಜಾ ಟಿಸಿ ವಿತರಣೆ, ಲೋಡ್ ಸೆಡ್ಡಿಂಗ್ ಸಮಸ್ಯೆ ಸರಿಪಡಿಸುವುದಾಗಿ ಭರವಸೆ ನೀಡಿದರು.
ಹನೂರು ತಾಲೂಕು ಅಧ್ಯಕ್ಷ ಚಿಕ್ಕರಾಜು, ಜಿಲ್ಲಾ ರೈತ ಸಂಘ ಗೌರವಾಧ್ಯಕ್ಷ ರಾಮಕೃಷ್ಣ, ಯಳಂದೂರು ಗೌರವಾಧ್ಯಕ್ಷ ಮಲ್ಲಿಗೆಹಳ್ಳಿ ಕಾಂತರಾಜು, ಕುಣಗಳ್ಳಿ ರಂಗಸ್ವಾಮಿ ಇದ್ದರು.