ಎಚ್.ಡಿ.ಕೋಟೆ : ಪದವಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮಂಜೂರು ಮಾಡುವಂತೆ ಒತ್ತಾಯಿಸಿ ಸೋಮವಾರ ಎಬಿವಿಪಿ ವಿದ್ಯಾರ್ಥಿ ಸಂಘಟನೆ ಸಹಯೋಗದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ತಹಸೀಲ್ದಾರ್ ಮೂಲಕ ಮನವಿ ಪತ್ರ ಸಲ್ಲಿಸಿದರು.
ಪಟ್ಟಣದ ಆಡಳಿತ ಸೌಧದ ಆವರಣದಲ್ಲಿ ಸೇರಿದ ಪ್ರತಿಭಟನಾಕಾರರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜಕಲ್ಯಾಣ ಇಲಾಖೆ, ಆಯುನ್ ಇಲಾಖೆ, ತಾಂತ್ರಿಕ ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಡಿಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ತಮ್ಮ ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣ ಪಡೆಯುತ್ತಿದ್ದಾರೆ. ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಿದೆ. ಆದರೆ ರಾಜ್ಯ ಸರ್ಕಾರ ಸರಿಯಾದ ಸಮಯಕ್ಕೆ ವಿದ್ಯಾರ್ಥಿ ವೇತನ ನೀಡದೆ ಲಕ್ಷಾಂತರ ವಿದ್ಯಾರ್ಥಿಗಳನ್ನು ಅತಂತ್ರ ಸ್ಥಿತಿಗೆ ತರುವ ಕೆಲಸವನ್ನು ಮಾಡಿದೆ ಎಂದು ದೂರಿದರು.
ರಾಜ್ಯದ ರೈತರ ಮಕ್ಕಳ ಶಿಕ್ಷಣಕ್ಕಾಗಿ ಹಿಂದಿನ ಸರ್ಕಾರ ರೈತ ವಿದ್ಯಾನಿ ವಿದ್ಯಾರ್ಥಿ ವೇತನವನ್ನು ಪ್ರಾರಂಭಿಸಿತ್ತು. ಈಗಿನ ರಾಜ್ಯ ಸರ್ಕಾರ ತಡೆ ಹಿಡಿಯುವ ಕೆಲಸವನ್ನು ಮಾಡಿ ರೈತರ ಮಕ್ಕಳ ಶಿಕ್ಷಣವನ್ನು ಕಸಿದುಕೊಂಡಿದೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರ 2022-24ನೇ ಸಾಲಿನಲ್ಲಿ ರಾಜ್ಯದ ವಿದ್ಯಾರ್ಥಿಗಳಿಗೆ ಮಂಜೂರಾದ ವಿದ್ಯಾರ್ಥಿ ವೇತನ ತಡೆ ಹಿಡಿದು ಅ ಹಣವನ್ನು ಇನ್ನಿತರ ಕಾರ್ಯ ಗಳಿಗಾಗಿ ಬಳಸುತ್ತಿದೆ. ರಾಜ್ಯ ಸರ್ಕಾರವು 2023-24 ನೇ ಸಾಲಿನ ವಿದ್ಯಾರ್ಥಿ ವೇತನವನ್ನು ಇನ್ನು ಕೆಲ ವಿದ್ಯಾರ್ಥಿಗಳಿಗೆ ನೀಡಿಲ್ಲ. ಆದರೆ 2024-25 ನೇ ಸಾಲಿನಲ್ಲಿ ಮತ್ತೆ ವಿದ್ಯಾರ್ಥಿ ವೇತನಕ್ಕೆ ಅರ್ಜಿಗಳನ್ನು ಆಹ್ವಾನಿಸಿದ್ದು, ವಿದ್ಯಾರ್ಥಿಗಳ ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ. ಆದ್ದರಿಂದ ಈ ಕೂಡಲೇ 2023-24 ನೇ ಸಾಲಿನ ವಿದ್ಯಾರ್ಥಿವೇತನವನ್ನು ಬಿಡುಗಡೆಗೊಳಿಸಿ. 2024-25ನೇ ಸಾಲಿನ ವಿದ್ಯಾರ್ಥಿ ವೇತನ ಅರ್ಜಿಗಳನ್ನು ಮುಂದುವರಿಸಿ, ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.