

ಮುಂಡಗೋಡ: ವಿವಿಧ ಬೇಡಿಕೆ ಈಡೇರಿಸುಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯದಲ್ಲಿ ಅತಿವೃಷ್ಟಿಯಿಂದಾಗಿ ಹಾನಿಗೀಡಾದ ಬೆಳೆಗಳಿಗೆ ಬೆಳೆ ಪರಿಹಾರ ನೀಡಬೇಕು. ಮಳೆಯಿಂದಾಗಿ ರಸ್ತೆಗಳು ಗುಂಡಿಮಯವಾಗಿದ್ದು, ರಸ್ತೆಗಳಲ್ಲಿ ಬಿದ್ದಿರುವ ಗುಂಡಿಯನ್ನು ಸರಿಪಡಿಸಬೇಕು. ಜಿಲ್ಲೆಯಲ್ಲಿ 1978ರ ಪೂರ್ವದಿಂದ ಸಾಗುವಳಿ ಮಾಡಿಕೊಂಡು ಬರುತ್ತಿರುವ ದಲಿತರಿಗೆ ಮತ್ತು ಎಲ್ಲ ವರ್ಗದ ಜನರಿಗೆ ಕೂಡಲೇ ಹಕ್ಕು ಪತ್ರ ನೀಡಬೇಕು. ಅರಣ್ಯ ಅತಿಕ್ರಮಣದಾರರಿಗೆ ಕೂಡಲೇ ಕಂದಾಯಇಲಾಖೆಯಿಂದ ಹಕ್ಕು ಪತ್ರ ಉತಾರ ನೀಡಬೇಕು. ಜತೆಗೆ ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದ್ದು, ಇದನ್ನು ತಡೆಗಟ್ಟಲು ಸರ್ಕಾರ ಸೂಕ್ತ ಕ್ರಮಕೈಗೊಳ್ಳಬೇಕು. ಮುಂಡಗೋಡ ಪಟ್ಟಣದಲ್ಲಿ ಅಪರಾಧ ತಡೆಗಾಗಿ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ಅಪರಾಧ ನಡೆಯದಂತೆ ಹಾಗೂ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಲು ಸಂಬಂಧಪಟ್ಟ ಇಲಾಖೆಗೆ ಆದೇಶಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರ ಕೂಡಲೇ ಬಗೆಹರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ರಸ್ತೆಗಿಳಿದು ಧರಣಿ ಮತ್ತು ಸರ್ಕಾರಕ್ಕೆ ಕಪ್ಪು ಬಟ್ಟೆತೋರಿಸುವ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಧ್ಯಕ್ಷ ಚಿದಾನಂದ ಹರಿಜನ, ಉಪಾಧ್ಯಕ್ಷ ಭೀಮಸಿ ವಾಲ್ಮೀಕಿ, ರಾಜ್ಯಜಂಟಿ ಕಾರ್ಯದರ್ಶಿ ಗೋವಿಂದಪ್ಪ ಬೆಂಡ್ಲಗಟ್ಟಿ, ರಾಜ್ಯ ಸಹ ಕಾರ್ಯದರ್ಶಿ ಶಾಂತಪ್ಪ ಪಾಟೀಲ, ಜಿಲ್ಲಾಧ್ಯಕ್ಷ ಶಂಕರ ತಿಪ್ಪಣ್ಣನವರ ಇತರರಿದ್ದರು.