ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

Protest demanding fulfillment of demands
ಪಿಡಿಒ, ಸದಸ್ಯರಿಂದ ಆದ ಅನ್ಯಾಯ ಸರಿಪಡಿಸಬೇಕೆಂದು ಆಗ್ರಹಿಸಿ ತೇರದಾಳ ತಾಲೂಕಿನ ಹನಗಂಡಿ ಗ್ರಾಪಂ ಎದುರು 8 ಜನರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ. ಪಾರ್ವತಿ ರೋಡ್ಡನವರ, ಪರಪ್ಪ ರೊಡ್ಡನ್ನವರ ಹಾಗೂ ಸೊಸೆ ದೀಪಾ ಇತರರಿದ್ದಾರೆ.
Published on

ತೇರದಾಳ: ತಾಲೂಕಿನ ಹನಗಂಡಿ ಗ್ರಾಪಂನಲ್ಲಿ ನಡೆದಿರುವ ಅವ್ಯವಹಾರ ಹಾಗೂ ಸ್ಥಳೀಯರಿಗೆ ಆಗಿರುವ ಅನ್ಯಾಯ ಸರಿಪಡಿಸಲು ಆಗ್ರಹಿಸಿ ಪಂಚಾಯಿತಿ ಆವರಣದಲ್ಲಿ 8 ಜನರು ಗುರುವಾರ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.

2017ರಿಂದ 2024ರ ಮಾರ್ಚ್‌ವರೆಗೆ ಗ್ರಾಮ ಪಂಚಾಯಿತಿಯಲ್ಲಿ ವಾಟರ್‌ಮನ್, ಸ್ವೀಪರ್, ಕಸದ ವಾಹನ ಚಾಲಕ ಸೇರಿ ವಿವಿಧ ಕೆಲಸ ನಿರ್ವಹಿಸಿ, ಜಿಲ್ಲಾ ಪಂಚಾಯಿತಿ ನನ್ನ ನೌಕರಿ ಕಾಯಂ ಮಾಡುವಾಗ ವೈಯಕ್ತಿಕ ಕಾರಣಕ್ಕೆ ಎರಡು ದಿನ ರಜೆಯಿದ್ದೆ ಎಂಬ ನೆಪವೊಡ್ಡಿ ಕೆಲಸದಿಂದ ಪಿಡಿಒ ತೆಗೆದು ಹಾಕಿದ್ದಾರೆ ಎಂದು ಧರಣಿ ನಿರತರಲ್ಲಿ ಒಬ್ಬರಾದ ಆನಂದ ಗುಬಚೆ ಆರೋಪಿಸಿದರು.

ತಮ್ಮ ರೇಷನ್ ಕಾರ್ಡ್ ಸಂಖ್ಯೆ ಬಳಸಿ ಶೌಚಗೃಹಕ್ಕೆ ಮಂಜೂರಾದ ಅನುದಾನವನ್ನು ಬೇರೊಂದು ಖಾತೆಗೆ ಮೂರು ವರ್ಷಗಳ ಹಿಂದೆ ವರ್ಗಾಯಿಸಿದ್ದಾರೆ. ಈಗ ವೈಯಕ್ತಿಕ ಶೌಚಗೃಹ ಕಟ್ಟಿಸಿಕೊಳ್ಳಲು ಅರ್ಜಿ ಸಲ್ಲಿಸಲು ಪಂಚಾಯಿತಿಗೆ ತೆರಳಿದಾಗ ವಿಷಯ ಬಹಿರಂಗವಾಗಿದೆ. ನಮ್ಮ ಕುಟುಂಬದ ಹಲವರ ಹೆಸರಿನಲ್ಲಿ ಅಲ್ಲದೆ ಅಂದಾಜು 50ರಿಂದ 60 ಶೌಚಗೃಹದ ಅನುದಾನ ಲೂಟಿ ಮಾಡಿದ್ದಾರೆ. ಕೂಡಲೇ ಮೇಲಧಿಕಾರಿಗಳು ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದರು.

ನಮ್ಮ ಜಾಗದಲ್ಲಿದ್ದ ಶೆಡ್ ತೆರವುಗೊಳಿಸಿ ಅದನ್ನು ತಮ್ಮದೆಂದು ಗ್ರಾಪಂನವರು ಬೇಲಿ ಹಾಕಿದ್ದನ್ನು ತೆರವುಗೊಳಿಸಿ, ಅದರ ಪಹಣಿ ನೀಡಬೇಕೆಂದು ಪಾರ್ವತಿ ರೋಡ್ಡನವರ, ಅವರ ಪತಿ ಪರಪ್ಪ ರೊಡ್ಡನ್ನವರ ಹಾಗೂ ಸೊಸೆ ದೀಪಾ, ಮಹೇಶ ಗೌಂಡಿ, ಸುಭಾಸ ಯಳಕಾರ ಸೇರಿ ಒಟ್ಟು 8 ಜನರು ಧರಣಿ ಕೈಗೊಂಡಿದ್ದಾರೆ.

ಇವರಿಗೂ ಆಶ್ರಯ ಯೋಜನೆ ಮನೆ ಮಂಜೂರು ಮಾಡಿಲ್ಲ. ಗ್ರಾಪಂ ಸದಸ್ಯರು, ಅವರ ಸಂಬಂಧಿಕರು ಹಾಗೂ ಹಿಂಬಾಲಕರಿಗೆ ಮಾತ್ರ ಸೌಲಭ್ಯ ನೀಡುತ್ತಾರೆ. ಕೂಡಲೇ ಜಿಲ್ಲಾಧಿಕಾರಿಗಳು ಮಧ್ಯಸ್ಥಿಕೆ ವಹಿಸಿ ಗ್ರಾಪಂನಲ್ಲಿ ನಡೆದಿರುವ ಅಕ್ರಮ ಬಯಲಿಗೆಳೆಯದು ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಒದಗಿಸಬೇಕು ಎಂದರು.

ಇದು ಅವರ ವೈಯಕ್ತಿಕ ಜಗಳವಾಗಿದ್ದು, ಈ ಪ್ರತಿಭಟನೆಗೂ ಗ್ರಾಮ ಪಂಚಾಯಿತಿಗೂ ಸಂಬಂಧವಿಲ್ಲ. ಅವರು ಮಾಡಿರುವ ಆರೋಪಗಳೆಲ್ಲವೂ ನಿರಾಧಾರ. ಸಮಸ್ಯೆ ಬಗೆಹರಿಸಲು ಗ್ರಾಮದ ಹಲವು ಹಿರಿಯರು ಮಧ್ಯಸ್ಥಿಕೆ ವಹಿಸಲು ಮುಂದಾಗಿದ್ದರೂ ಈ ರೀತಿ ಧರಣಿ ಕೈಗೊಂಡಿದ್ದಾರೆ. -ಪ್ರಹ್ಲಾದ್ ರಾವಳ, ಪಿಡಿಒ, ಹನಗಂಡಿ ಗ್ರಾಪಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net