ಸ್ವಂತ ಮನೆ ನಮ್ಮ ಹಕ್ಕು ಸಮಿತಿ ಪ್ರತಿಭಟನೆ: ಸಮೀಕ್ಷಾ ತಂಡ ರಚನೆ ಮಾಡಲು ಆಗ್ರಹ

Protest demanding formation of survey team Mandya
Published on

ಮಂಡ್ಯ: ನಗರ ಪ್ರದೇಶದಲ್ಲಿ ವಸತಿ ರಹಿತರನ್ನು ಗುರುತಿಸಲು ಪ್ರತಿ ವಾರ್ಡ್ ಮಟ್ಟದಲ್ಲಿ ಸಮೀಕ್ಷಾ ತಂಡ ರಚನೆ ಮಾಡಬೇಕು ಎಂದು ಒತ್ತಾಯಿಸಿ ಸ್ವಂತ ಮನೆ ನಮ್ಮ ಹಕ್ಕು ಹೋರಾಟ ಸಮಿತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಸಮಿತಿ ಕಾರ್ಯಕರ್ತರು, ರಾಜೀವ್ ಗಾಂಧಿ ವಸತಿ ಯೋಜನೆಗೆ ಅರ್ಜಿ ಸಲ್ಲಿಸಿರುವವರಿಗೆ ವಸತಿ ಸೌಲಭ್ಯ ಕಲ್ಪಿಸಿ ಕೊಡುವುದಾಗಿ ಜಿಲ್ಲಾಡಳಿತ ಹೇಳಿದೆ. ಆದರೆ ಈ ಯೋಜನೆ ಬಗ್ಗೆ ವಸತಿ ರಹಿತ ಸಂತ್ರಸ್ತರಿಗೆ ತಿಳಿದಿಲ್ಲ. ಅಷ್ಟೇ ಅಲ್ಲದೆ ಕಳೆದ ಎಂಟು, ಒಂಭತ್ತು ವರ್ಷದಿಂದ ಅರ್ಜಿ ಸಲ್ಲಿಕೆ ಮಾಡಿರುವವರಿಗೆ ಇದುವರೆಗೆ ಸೌಲಭ್ಯ ಕಲ್ಪಿಸಲು ಯಾವುದೇ ಕ್ರಮ ವಹಿಸಿಲ್ಲ. ಇದರಿಂದ ನಂಬಿಕೆ ಕಳೆದುಕೊಂಡಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ಹಿನ್ನೆಲೆಯಲ್ಲಿ ಪ್ರತಿ ವಾರ್ಡ್ ಮಟ್ಟದಲ್ಲಿ ಸಮೀಕ್ಷೆ ನಡೆಸಿ ಪಟ್ಟಿ ತಯಾರಿಸಲು ತಂಡ ರಚಿಸಬೇಕು. ಸ್ವಂತ ಮನೆಯಿಲ್ಲದ ಸಂತ್ರಸ್ತರಿಗೆ ಯೋಜನೆಗಳ ಬಗ್ಗೆ ಅರಿವು ಮೂಡಿಸಬೇಕು. ಅದೇ ರೀತಿ ರಾಜೀವ್ ಗಾಂಧಿ ವಸತಿ ಯೋಜನೆಯನ್ನು ತುರ್ತು ವಿಚಾರ ಎಂದು ಪರಿಗಣಿಸಿ ಆದಷ್ಟು ಶೀಘ್ರ ಸ್ವಂತ ಮನೆ ನಿರ್ಮಾಣ ಮಾಡಿಕೊಡಬೇಕು. ಚುನಾಯಿತ ಜನಪ್ರತಿನಿಧಿ, ಸರ್ಕಾರಿ ನೌಕರರಿಗೆ ಎಚ್‌ಆರ್‌ಒ ನೀಡುವ ಮಾದರಿಯಲ್ಲಿ ಸ್ವಂತ ಮನೆ ನಿರ್ಮಾಣ ಮಾಡಿಕೊಡುವವರೆಗೆ ಮನೆ ಬಾಡಿಗೆ ಹಣ ನೀಡಲು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಮಿತಿಯ ಅಭಿ ಒಕ್ಕಲಿಗ, ನರಸಿಂಹಮೂರ್ತಿ, ಎಂ.ವಿ.ಕೃಷ್ಣ, ವೆಂಕಟಲಕ್ಷ್ಮಮ್ಮ, ಸಮೀರ್ ಅಹಮದ್, ಎಚ್.ಡಿ. ಜಯರಾಂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net