ಪಾಕಿಸ್ತಾನಕ್ಕೆ ಗಡಿಪಾರು ಮಾಡಲು ಆಗ್ರಹಿಸಿ ಪ್ರತಿಭಟನೆ

21HSN2
Published on

ಹಾಸನ : ಭಾರತದಲ್ಲಿದ್ದುಕೊಂಡು ಪಾಕಿಸ್ತಾನ ಪರ ಘೋಷಣೆ ಕೂಗಿರುವ ಪದವಿ ವಿದ್ಯಾರ್ಥಿನಿ ಅಮೂಲ್ಯ ಲಿಯೋನಾ ಅವರನ್ನು ಪಾಕಿಸ್ತಾನಕ್ಕೆ ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್ ಶೆಟ್ಟಿ ಬಣ) ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.

ನಗರದ ಹೇಮಾವತಿ ಪ್ರತಿಮೆ ಎದುರು ಜಮಾಯಿಸಿದ ಪ್ರತಿಭಟನಾಕಾರರು ಸಿಎಎ ಹೋರಾಟಗಾರರ ವಿರುದ್ಧ ಧಿಕ್ಕಾರ ಕೂಗಿದರು.

ಬೆಂಗಳೂರಿನ ಸ್ವಾತಂತ್ರೃ ಹೋರಾಟಗಾರರ ಉದ್ಯಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅಮೂಲ್ಯ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆ. ಹುಬ್ಬಳಿಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಪಾಕಿಸ್ತಾನ ಪ್ರೇಮ ಮೆರೆದಿದ್ದಾರೆ. ಇಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಈ ನಾಡಿನ ಅನ್ನ, ನೀರು, ಗಾಳಿ ಬಳಸಿ ಹೊರ ದೇಶದ ಪರ ಘೋಷಣೆ ಕೂಗುವುದು ದೇಶದ್ರೋಹದ ಕೆಲಸ. ದೇಶದ ಪ್ರಧಾನಿ ಹಾಗೂ ಗೃಹ ಸಚಿವರನ್ನು ಏಕವಚನದಿಂದ ಕರೆಯುವ ಸಂಸ್ಕೃತಿ ಒಳ್ಳೆಯದಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಂತಿಯುತ ಪ್ರತಿಭಟನೆಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಆ ಸ್ವಾತಂತ್ರೃವನ್ನು ಸ್ವೇಚ್ಛಾಚಾರವಾಗಿ ಬಳಸಿಕೊಳ್ಳಬಾರದು. ಸಿಎಎ, ಎನ್‌ಆರ್‌ಸಿ ವಿರೋಧಿಸಿ ಹಮ್ಮಿಕೊಂಡಿರುವ ಪ್ರತಿಭಟನೆ ದುರುದ್ದೇಶದಿಂದ ಕೂಡಿದೆ ಎಂದು ಆರೋಪಿಸಿದರು.

ಪುಲ್ವಾಮಾದಲ್ಲಿ ಪಾಕಿಸ್ತಾನ ಸೈನಿಕರು ದಾಳಿ ನಡೆಸಿ 40 ಭಾರತೀಯ ಸೈನಿಕರ ಬಲಿ ಪಡೆದು ವರ್ಷವಾಗಿದ್ದು, ಆ ಕರಾಳ ನೆನಪು ಮಾಸುವ ಮುನ್ನವೇ ಆ ದೇಶದ ಪರ ಪ್ರೀತಿ ತೋರುವುದು ಎಷ್ಟರ ಮಟ್ಟಿಗೆ ಸರಿ. ಇಂಥ ದೇಶದ್ರೋಹಿಗಳನ್ನು ಗಲ್ಲಿಗೇರಿಸಬೇಕು. ಭಾರತಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಎಷ್ಟೇ ಆಕ್ರಮಣಕಾರರು ದಾಳಿ ನಡೆಸಿದರೂ ಶಾಂತಿ, ಸಹಬಾಳ್ವೆಯಿಂದ ಎದುರಿಸಿದ ಹಾಗೂ ಎಲ್ಲರನ್ನೂ ಪ್ರೀತಿಸುವ ಸಂಸ್ಕೃತಿ ನಮ್ಮದಾಗಿದೆ. ಆದರೆ ಪಾಕಿಸ್ತಾನ ಈ ವಿಚಾರದಲ್ಲಿ ತದ್ವಿರುದ್ಧವಾಗಿದೆ. ಹಿಂದುಸ್ತಾನಕ್ಕೆ ಮಗ್ಗಲು ಮುಳ್ಳಾಗಿ ಕಾಡುತ್ತಿರುವ ಆ ದೇಶದ ವಿರುದ್ಧ ಭಾರತೀಯರೆಲ್ಲರೂ ಒಟ್ಟಾಗಿ ಹೋರಾಡಬೇಕಿದೆ ಎಂದು ಸಲಹೆ ನೀಡಿದರು.

ಕರವೇ ಜಿಲ್ಲಾಧ್ಯಕ್ಷ ಸತೀಶ್ ಪಟೇಲ್, ತಾಲೂಕು ಅಧ್ಯಕ್ಷ ರಘುಗೌಡ, ಉಪಾಧ್ಯಕ್ಷ ಸುನೀಲ್ ಗೌಡ, ಮನು, ಅಣ್ಣಪ್ಪ, ಮನೋಜ್, ದಿಲೀಪ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net