ಸಮರ್ಪಕ ಪರಿಹಾರ ವಿತರಣೆಗೆ ಆಗ್ರಹಿಸಿ ಪ್ರತಿಭಟನೆ

hkr STRIKE
Published on

ಹಿರೇಕೆರೂರ: ಬರ ಪರಿಹಾರ ಸಮರ್ಪಕ ವಿತರಣೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ತಾಲೂಕು ಕೆ.ಎಸ್. ಪುಟ್ಟಣ್ಣಯ್ಯ ಬಣದ ರೈತ ಸಂಘದಿಂದ ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಎಚ್. ಪ್ರಭಾಕರಗೌಡ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ಪ್ರತಿ ಹೆಕ್ಟೇರ್‌ಗೆ ಕನಿಷ್ಠ 6500 ರೂಪಾಯಿ ಪರಿಹಾರ ನೀಡಿ ರೈತರಿಗೆ ಧೈರ್ಯ ತುಂಬಬೇಕಾದ ರಾಜ್ಯ ಸರ್ಕಾರ, ಕೇವಲ ಕೇಂದ್ರ ಸರ್ಕಾರದಿಂದ ಬಂದಂತಹ ಪರಿಹಾರ ವಿತರಿಸುತ್ತಿದೆ. ಕಡಿಮೆ ಪರಿಹಾರಕ್ಕೆ ಕೇಂದ್ರದ ಕಡೆ ಬೊಟ್ಟು ತೋರಿಸುವುದನ್ನು ಬಿಟ್ಟು ಸೂಕ್ತ ಪರಿಹಾರ ವಿತರಿಸಬೇಕು. ಅಕ್ರಮ ಸಕ್ರಮ ಯೋಜನೆಗೆ ಹಣ ತುಂಬಿಸಿಕೊಂಡು ಮೂರು ವರ್ಷಗಳಾದರೂ ಕಂಬ, ತಂತಿ, ಟಿಸಿ ಕೊಡುವುದನ್ನು ನಿಲ್ಲಿಸಿದೆ. ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಕೆಯಲ್ಲಿ ಓವರ್ ಲೋಡ್ ಇರುವಲ್ಲಿ ಹೆಚ್ಚಿನ ಸಾಮರ್ಥ್ಯದ ಟಿಸಿಗಳನ್ನು ಅಳವಡಿಸಬೇಕು ಎಂದು ಆಗ್ರಹಿಸಿದರು.

ರೈತ ಸಂಘದ ಮಲ್ಲಿಕಾರ್ಜುನ ಬಳ್ಳಾರಿ, ತಾಲೂಕು ರೈತ ಸಂಘದ ಅಧ್ಯಕ್ಷ ಪ್ರಭುಗೌಡ ಪ್ಯಾಟಿ ಮಾತನಾಡಿದರು. ಮಾಲತೇಶ ಪೂಜಾರ, ಗಂಗನಗೌಡ ಮುದಿಗೌಡ್ರ, ಶಂಕ್ರಗೌಡ ಮಕ್ಕಳ್ಳಿ, ಶಾಂತನಗೌಡ ಪಾಟೀಲ, ಫಯಾಜ್ ದೊಡ್ಮನಿ ಹಾಗೂ ರೈತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net