

ವಿಜಯವಾಣಿ ಸುದ್ದಿಜಾಲ ಧಾರವಾಡ
ರಾಜ್ಯಪಾಲರ ನಡೆ ಖಂಡಿಸಿ ಎಐಸಿಸಿ ಮಾಜಿ ಸದಸ್ಯ ದೀಪಕ ಚಿಂಚೋರೆ ನೇತೃತ್ವದಲ್ಲಿ ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಲಾಯಿತು.
ಶೋಷಿತ ಸಮುದಾಯಗಳ ನಾಯಕ ಮುಖ್ಯಮಂತ್ರಿ ಸಿದ್ದರಾಮಯ್ಯನವರ ತೇಜೋವಧೆಗೆ ಬಿಜೆಪಿ, ಜೆಡಿಎಸ್ ಕಾರಣ. ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ. ಹೀಗಾಗಿ ಕೂಡಲೇ ಈ ವಿಷಯದಲ್ಲಿ ರಾಷ್ಟ್ರಪತಿಗಳು ಮಧ್ಯ ಪ್ರವೇಶಿಸಿ ರಾಜ್ಯಪಾಲರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಈ ಹಿಂದೆ ಸಹ ಹಿಂದುಳಿದ ವರ್ಗಗಳ ನಾಯಕರಾಗಿದ್ದ ದೇವರಾಜ ಅರಸು, ಎಸ್. ಬಂಗಾರಪ್ಪ, ಧರ್ಮಸಿಂಗ್, ವೀರಪ್ಪ ಮೊಯಿಲಿ, ಇತರರ ವಿರುದ್ಧ ಇಂತಹದ್ದೇ ಆಧಾರ ರಹಿತ ಷಡ್ಯಂತ್ರ ರೂಪಿಸಲಾಗಿತ್ತು. ಈಗ ಶೋಷಿತ ಸಮುದಾಯಗಳು ಬಹಳ ಜಾಗೃತವಾಗಿವೆ ಎಂಬುದನ್ನು ಮರೆತು, ಸಮಾಜವಾದದ ಹಿನ್ನೆಲೆಯಿಂದ ಬಂದಿರುವ ಸಿದ್ಧರಾಮಯ್ಯನವರ ಮೇಲೆ ಆರೋಪ ಮಾಡುತ್ತಿದ್ದಾರೆ. ಬಡವರು, ಮಹಿಳೆಯರು, ರೈತರು, ಕಾರ್ಮಿಕರು ಸಿದ್ಧರಾಮಯ್ಯ ಮತ್ತು ಕಾಂಗ್ರೆಸ ಸರ್ಕಾರದ ಪರ ನಿಂತಿದ್ದಾರೆ. ಆದಾಗ್ಯೂ ರಾಜ್ಯಪಾಲರನ್ನು ಕೇಂದ್ರ ಸರ್ಕಾರವು ತಮ್ಮ ಪದ ಏಂಜೆಂಟರಂತೆ ನಡೆಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.
ರಾಜ್ಯಪಾಲರು ಒಂದು ಪಕ್ಷದ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಹೀಗಾಗಿ ಕೂಡಲೇ ಅವರನ್ನು ವಜಾಗೊಳಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯದ ಜನರು ದಂಗೆ ಎದ್ದರೆ ರಾಷ್ಟ್ರಪತಿಗಳು ಹಾಗೂ ಕೇಂದ್ರ ಸರ್ಕಾರವೇ ಹೊಣೆ ಎಂದು ಎಚ್ಚರಿಕೆ ನೀಡಿ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿಪತ್ರ ರವಾನಿಸಿದರು.
ದೀಪಕ ಚಿಂಚೋರೆ, ಪಾಲಿಕೆ ಸದಸ್ಯ ಶಂಭು ಸಾಲಮನಿ, ಮುಖಂಡರಾದ ಹನಮಂತ ಕೊರವರ, ತುಳಜಪ್ಪ ಪೂಜಾರ, ನಾಗರಾಜ ಗುರಿಕಾರ, ಪಿ.ಕೆ. ನೀರಲಕಟ್ಟಿ, ಆನಂದ ಮೂಶಣ್ಣವರ, ಮಂಜುನಾಥ ಭೋವಿ, ಮೆಹಬೂಬಖಾನ ಪಠಾಣ, ಇತರರು ಇದ್ದರು.