

ಜಮಖಂಡಿ: ಕರ್ನಾಟಕ ಸರ್ಕಾರ ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿರುವ ರಾಜ್ಯಪಾಲರನ್ನು ವಜಾಗೊಳಿಸಬೇಕೆಂದು ಆಗ್ರಹಿಸಿ ನಗರದಲ್ಲಿ ಅಹಿಂದ ಸಂಘಟಕರು ಗುರುವಾರ ಪ್ರತಿಭಟನೆ ನಡೆಸಿದರು.
ನಗರದ ದೇಸಾಯಿ ವೃತ್ತದಲ್ಲಿ ಕೆಲಕಾಲ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಸದಾಶಿವ ಮಕ್ಕೋಜಿ ಅವರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
ಮುಖಂಡ ಯಲ್ಲಪ್ಪ ಹೆಗಡೆ ಮಾತನಾಡಿ, ಕರ್ನಾಟಕದ ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ಬಹುಮತ ಹೊಂದಿರುವ ರಾಜ್ಯಸರ್ಕಾರ ಅಸ್ಥಿರಗೊಳಿಸುವ ದುರುದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾನೂನಿನ ಪೂರ್ವಾಪರ ಅಧ್ಯಯನ ಮಾಡದೆ ಶೋಕಾಸ್ ನೋಟಿಸ್ ನೀಡಿದ್ದಾರೆ. ಜನಪರ ಆಡಳಿತ ನಡೆಸುತ್ತಿರುವ ಸರ್ಕಾರ ರಾಜ್ಯದ ಸಮಗ್ರ ಜನರ ಹಿತ ಕಾಪಾಡುತ್ತಿದೆ. ಇಂತಹ ಸಂದರ್ಭ ಸುಭದ್ರ ಆಡಳಿತ ನಡೆಸುತ್ತಿರುವ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿ ಸರ್ಕಾರ ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿರುವ ರಾಜ್ಯಪಾಲರ ಪ್ರಜಾಪ್ರಭುತ್ವದ ವಿರೋಧಿ ನಡೆಯನ್ನು ರಾಜ್ಯದ ಜನತೆ ಖಂಡಿಸಿದ್ದಾರೆ ಎಂದರು.
ಮುಖಂಡ ಹೂವಪ್ಪ ಉಷಾಕರ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತೇಜೋವಧೆ ಮಾಡುವ ಉದ್ದೇಶದಿಂದ ಮೈಸೂರ ಚಲೋ ಪಾದಯಾತ್ರೆ ನಡೆಸುತ್ತಿರುವ ಬಿಜೆಪಿ- ಜೆಡಿಎಸ್ ಪಕ್ಷಗಳ ನಡೆ ಖಂಡನೀಯ ಎಂದರು.
ಕುಮಾರ ಆಲಗೂರ, ಸುಮಿತ್ರಾ ಗುಳಬಾಳ, ಈಶ್ವರ ದಳವಾಯಿ, ಎಂ.ಎಸ್. ಜಕ್ಕನ್ನವರ, ನಾಗು ಹೆಗಡೆ, ಮೀರಾ ಒಂಟಮೂರಿ, ಪುಟ್ಟು ಪಾನಿ, ಅಬುಬಕರ ಕುಡಚಿ, ಪ್ರೇಮ ಬಳೋಲಗಿಡದ, ಅಯ್ಯಜ ಸೈಯ್ಯದ್, ಮಹಾದೇವ ಪಾಟೀಲ, ಮಹಾದೇವ ಕಲೂತಿ, ಸಿದ್ದು ಕುರಣಿ, ಹಣಮಂತ ಯಮಗಾರ, ಪರಶು ನಾಟಿಕಾರ, ಭೀಮಶಿ ಮಾಳಿ, ಅಪ್ಪಾಸಿ ಗುರವ ಇತರರಿದ್ದರು.
ಸಿಎಂ ಸಿದ್ದರಾಮಯ್ಯ ಭಾವಚಿತ್ರಕ್ಕೆ ನಮಿಸಿದ ಅಜ್ಜಿ: ಜಮಖಂಡಿ ನಗರದಲ್ಲಿ ಅಹಿಂದ ಸಂಘಟನೆಯಿಂದ ನಡೆದ ರಸ್ತೆ ತಡೆ ಪ್ರತಿಭಟನೆಯಲ್ಲಿ ಯುವಕನೊಬ್ಬ ಹಿಡಿದುಕೊಂಡು ನಿಂತಿದ್ದ ಸಿಎಂ ಸಿದ್ದರಾಮಯ್ಯ ಭಾವಚಿತ್ರಕ್ಕೆ ಅಜ್ಜಿಯೊಬ್ಬರು ಹಣೆ ಹಚ್ಚಿ ನಮಸ್ಕರಿಸಿದ್ದು ಎಲ್ಲರ ಗಮನಸೆಳೆಯಿತು.