

ಹುಬ್ಬಳ್ಳಿ: ಅಂಜಲಿ ಅಂಬಿಗೇರ ಹಂತಕ ಗಿರೀಶ ಸಾವಂತಗೆ ಗಲ್ಲು ಶಿಕ್ಷೆ ಅಥವಾ ಎನ್‌ಕೌಂಟರ್ ಮಾಡಬೇಕೆಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ವೀರಾಪೂರ ಓಣಿಯಿಂದ ಶಹರ ಪೊಲೀಸ್ ಠಾಣೆವರೆಗೆ ಪ್ರತಿಭಟನಾ ರ‌್ಯಾಲಿ ನಡೆಸಿದ ಕಾರ್ಯಕರ್ತರು, ಪಗಡಿಗಲ್ಲಿಯಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಅಂಜಲಿ ಹತ್ಯೆಗೈದ ಆರೋಪಿ ವಿಶ್ವನಾಥ ಅಲಿಯಾಸ್ ಗಿರೀಶ ಸಾವಂತಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು. ಶಾಸಕ ಮಹೇಶ ಟೆಂಗಿನಕಾಯಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು, ಪೊಲೀಸ್ ಇಲಾಖೆ ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ ಮಾಸುವ ಮುನ್ನವೇ ಅಂಜಲಿ ಅಂಬಿಗೇರ ಹತ್ಯೆಯು ಹುಬ್ಬಳ್ಳಿ ಜನರನ್ನು ಬೆಚ್ಚಿ ಬೀಳಿಸಿದೆ. ರಾಜ್ಯ ಸರ್ಕಾರದ ಲೋಪ ಸ್ಪಷ್ಟವಾಗಿ ಕಾಣುತ್ತಿದೆ. ಇನ್ನಾದರೂ ರಾಜ್ಯ ಸರ್ಕಾರ ಮಹಿಳೆಯರ ಸಂರಕ್ಷಣೆಗೆ ಮುಂದಾಗಬೇಕು ಎಂದು ಶಾಸಕ ಮಹೇಶ ಟೆಂಗಿನಕಾಯಿ ಆಕ್ರೋಶ ವ್ಯಕ್ತಪಡಿಸಿದರು.
ಆರೋಪಿ ಬೆದರಿಕೆ ಹಾಕಿದ್ದಾಗ ಅಂಜಲಿ ಸಹೋದರಿ ಹಾಗೂ ಅಜ್ಜಿ ಈ ಕುರಿತು ಬೆಂಡಿಗೇರಿ ಠಾಣೆ ಪೊಲೀಸರ ಹತ್ತಿರ ದೂರು ಕೊಡಲು ಹೋಗಿದ್ದರು. ಆಗ ಪೊಲೀಸರು ಎಚ್ಚೆತ್ತುಕೊಂಡಿದ್ದರೆ ಈ ಪರಿಸ್ಥಿತಿ ನಿರ್ಮಾಣ ಆಗುತ್ತಿರಲಿಲ್ಲ. ಈ ಪರಿಸ್ಥಿತಿಗೆ ಪೊಲೀಸರ ನಿರ್ಲಕ್ಷೃವೇ ಕಾರಣ. ಜನರು ಕಾನೂನು ಕೈಗೆತ್ತಿಕೊಳ್ಳುವ ಮುನ್ನವೇ ಸರ್ಕಾರವೇ ಕಠಿಣ ಕ್ರಮ ಜರುಗಿಸಬೇಕೆಂದು ಟೆಂಗಿನಕಾಯಿ ಆಗ್ರಹಿಸಿದರು.
ಪ್ರಮುಖರಾದ ರಂಗಾ ಬದ್ದಿ, ಪ್ರಕಾಶ ಬುರಬುರೆ, ವಿಜಯ ಗುಂಟ್ರಾಳ, ಶಿವು ಮೆಣಸಿನಕಾಯಿ, ರಾಜು ಜರತಾರಘರ, ಇತರರು ಪ್ರತಿಭಟನೆಯಲ್ಲಿದ್ದರು.