ಸಾರಾಯಿ ಅಕ್ರಮ ಮಾರಾಟಕ್ಕೆ ಕಡಿವಾಣ ಹಾಕಲು ಆಗ್ರಹಿಸಿ ಪ್ರತಿಭಟನೆ

akrama sarayi
ವಿಜಯಪುರ ಜಿಲ್ಲಾಡಳಿತಕ್ಕೆ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಅನಸೂಯಾ ಹಜೇರಿ, ಶಮಶಾದಬಿ ಚಡಚಣ, ಭೀಮಶಿ ಕಲಾದಗಿ ಮತ್ತಿತರರಿದ್ದಾರೆ.
Published on

ವಿಜಯಪುರ: ಸಾರಾಯಿ ಅಕ್ರಮ ಮಾರಾಟಕ್ಕೆ ತಡೆಯೊಡ್ಡಲು ಆಗ್ರಹಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಪದಾಧಿಕಾರಿಗಳು ಗುರುವಾರ ಜಿಲ್ಲಾಡಳಿತ ಮತ್ತು ಅಬಕಾರಿ ಅಧಿಕಾರಿ ಇಲಾಖೆಗೆ ಮನವಿ ಸಲ್ಲಿಸಿದರು.

ಸಂಘಟನೆ ಜಿಲ್ಲಾಧ್ಯಕ್ಷೆ ಅನಸೂಯಾ ಹಜೇರಿ ಮಾತನಾಡಿ, ತಿಡಗುಂದಿ ಹಾಗೂ ಮಖಣಾಪುರ ಗ್ರಾಮಗಳಲ್ಲಿ ಸಾರಾಯಿ ಮಾರಾಟ ಅವ್ಯಾಹತವಾಗಿದೆ. ಪಾನ್‌ಬೀಡಾ ಅಂಗಡಿಗಳು, ಚಹಾದ ಅಂಗಡಿ, ತೋಟಗಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಇದರಿಂದ ಬಡಕುಟುಂಬಗಳು ಬೀದಿಗೆ ಬೀಳುತ್ತಿವೆ. ಕೂಲಿ-ನಾಲಿ ಮಾಡಿ ಗಳಿಸಿದ ಹಣ ಸಾರಾಯಿಗೆ ಸುರಿಯುವಂತಾಗುತ್ತಿದೆ. ಗ್ರಾಮದಲ್ಲಿ ಅಶಾಂತಿ ಸೃಷ್ಠಿಯಾಗುತ್ತಿದೆ ಎಂದರು.

ಕಾನೂನು ಬಾಹಿರವಾಗಿ ಮದ್ಯ ಮಾರಾಟ ಮಾಡುತ್ತಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ಖೇದಕರ. ಇದರ ಹಿಂದೆ ಅಧಿಕಾರಿಗಳ ಕೈವಾಡವಿದೆಯಾ? ಎಂಬ ಶಂಕೆ ಇದೆ. ಹೀಗಾಗಿ ಕೂಡಲೇ ಅನಿರೀಕ್ಷಿತ ದಾಳಿ ನಡೆಸಿ ಅಕ್ರಮ ಸಾರಾಯಿ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ತಿಡಗುಂದಿ ಘಟಕದ ಅಧ್ಯಕ್ಷೆ ಶಮಶಾದಬಿ ಚಡಚಣ ಮಾತನಾಡಿ, ಅಧಿಕಾರಿಗಳು ಅಕ್ರಮ ಸಾರಾಯಿ ಮಾರಾಟಕ್ಕೆ ಕಡಿವಾಣ ಹಾಕದೇ ಇದ್ದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ಉಪಾಧ್ಯಕ್ಷ ಭೀಮಶಿ ಕಲಾದಗಿ ಮಾತನಾಡಿ, ತಿಡಗುಂದಿ ಗ್ರಾಮದಲ್ಲಿ ಪೊಲೀಸ್ ಠಾಣೆ ಇದ್ದರೂ ಅಕ್ರಮ ಸಾರಾಯಿ ಮಾರಾಟಕ್ಕೆ ಕಡಿವಾಣ ಹಾಕಲಾಗಿಲ್ಲ. ಹೀಗಾಗಿ ಕುಡುಕರ ಹಾವಳಿ ಹೆಚ್ಚಾಗಿದೆ. ಮಹಿಳೆಯರು ಅಡ್ಡಾಡುವುದೇ ದುಸ್ತರವಾಗಿದೆ ಎಂದರು.

ಅಣ್ಣಾರಾಯ ಈಳಗೇರ, ಸುರೇಖಾ ರಜಪೂತ, ಸೋನುಬಾಯಿ ಬ್ಯಾಳಿ, ರಾಜಮಾ ನದಾಫ, ಪ್ರಭಾವತಿ ಹಾವಿನಾಳ, ನೀಲಮ್ಮ ಬಿಜ್ಜರಗಿ, ರಾಜು ರಣದೇವಿ, ಸಾಯಬ್ಬಿ ಶೇಖ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net