ಅಂಡರ್‌ಪಾಸ್ ನಿರ್ಮಾಣಕ್ಕೆ ಆಗ್ರಹಿಸಿ ಪ್ರತಿಭಟನೆ

BKL Strike
Published on

ಭಟ್ಕಳ: ತಾಲೂಕಿನ ಕಾಯ್ಕಿಣಿ ಗ್ರಾಪಂ ವ್ಯಾಪ್ತಿಯ ಬಸ್ತಿಯಲ್ಲಿ ರಸ್ತೆ ಕಾಮಗಾರಿ ನಡೆಸಲು ಬಂದ ಐಆರ್‌ಬಿ ಸಂಸ್ಥೆಯ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಗ್ರಾಮಸ್ಥರು ತಡೆದು ಪ್ರತಿಭಟನೆ ನಡೆಸಿ ವಾಪಸ್ ಕಳುಹಿಸಿದ ಘಟನೆ ಬುಧವಾರ ನಡೆಯಿತು.

ಗ್ರಾಮ ಪಂಚಾಯಿತಿಯ ಉತ್ತರಕೊಪ್ಪಕ್ಕೆ ಹೋಗುವ ರಸ್ತೆಗೆ ಅಂಡರ್‌ಪಾಸ್ ನಿರ್ಮಿಕೊಡುವಂತೆ ಕಳೆದ 7ವರ್ಷಗಳಿಂದ ಜನರು ಆಗ್ರಹಿಸುತ್ತ ಬಂದಿದ್ದಾರೆ. ಮಾತ್ರವಲ್ಲ ಅಂಡರ್ ಪಾಸ್ ನಿರ್ಮಿಸದೇ ರಸ್ತೆ ವಿಸ್ತರಣೆಗೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು.

ಬುಧವಾರ ಹಿರಿಯ ಅಧಿಕಾರಿಗಳ ಒತ್ತಡದ ಮೇರೆಗೆ ಪೊಲೀಸರ ಸಹಾಯದಿಂದ ಕಾಮಗಾರಿ ನಡೆಸಲು ಐಆರ್‌ಬಿ ಅಧಿಕಾರಿಗಳು ಬಂದಿದ್ದರು. ಇದನ್ನು ತಿಳಿದ ಗ್ರಾಮಸ್ಥರು ಸ್ಥಳಕ್ಕೆ ತೆರಳಿ ಅಧಿಕಾರಿಗಳಿಗೆ ಮುತ್ತಿಗೆ ಹಾಕಿ ಕಾಮಗಾರಿ ನಡೆಸದಂತೆ ಎಚ್ಚರಿಕೆ ನೀಡಿದರು.

ಸ್ಥಳೀಯರ ಮನವೊಲಿಸಲು ಐಆರ್‌ಬಿ ಪ್ರಾಜೆಕ್ಟ್ ಡೈರಕ್ಟರ್ ಶಿವಕುಮಾರ ಯತ್ನಿಸಿದರು. ಇದಕ್ಕೊಪ್ಪದ ಗ್ರಾಮಸ್ಥರು ಅಂಡರ್ ಪಾಸ್ ನಿರ್ಮಿಸದೇ ರಸ್ತೆ ಕಾಮಗಾರಿಗೆ ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದರು.

ಸ್ಥಳಕ್ಕೆ ಉಪವಿಭಾಗಾಧಿಕಾರಿ ಡಾ. ನಯನಾ ತೆರಳಿ ಮನವೊಲಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಬಳಿಕ ಹಿರಿಯ ಅಧಿಕಾರಿಗಳೊಂದಿಗೆ ಗುರುವಾರ ಗ್ರಾಮಸ್ಥರ ಹಾಗೂ ಹೆದ್ದಾರಿ ವಿಸ್ತರಣೆಗೆ ಸಂಬಂಧಿಸಿದ ಅಧಿಕಾರಿಗಳ ಸಭೆ ಕರೆದಿದ್ದು ಅಲ್ಲಿಯವರೆಗೂ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಸೂಚನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net