ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಒತ್ತಾಯಿಸಿ ಪ್ರತಿಭಟನೆ

30-08-25--krs2 (1)
ಶ್ರೀರಂಗಪಟ್ಟಣ-ಕುಶಾಲನಗರ ಎಕ್ಸ್‌ಪ್ರೆಸ್ ಹೈವೆಯಲ್ಲಿ ಸರ್ವಿಸ್ ರಸ್ತೆ ನಿರ್ಮಾಣ ಮಾಡುವಂತೆ ಒತ್ತಾಯಿಸಿ ಬೆಳಗೊಳ ಹೋಬಳಿಯ ವಿವಿಧ ಗ್ರಾಮಗಳ ರೈತರು ರಸ್ತೆ ಕಾಮಗಾರಿ ತಡೆದು ಪ್ರತಿಭಟಿಸಿದರು.
Published on

ಕೆ.ಆರ್.ಸಾಗರ: ಶ್ರೀರಂಗಪಟ್ಟಣ-ಕುಶಾಲನಗರ ಎಕ್ಸ್‌ಪ್ರೆಸ್ ಹೈವೆಯಲ್ಲಿ ಸರ್ವಿಸ್ ರಸ್ತೆ ನಿರ್ಮಾಣ ಮಾಡುವಂತೆ ಒತ್ತಾಯಿಸಿ ಬೆಳಗೊಳ ಹೋಬಳಿಯ ವಿವಿಧ ಗ್ರಾಮಗಳ ರೈತರು ಶನಿವಾರ ರಸ್ತೆ ಕಾಮಗಾರಿ ತಡೆದು ಪ್ರತಿಭಟಿಸಿದರು.

ಬೆಳಗೊಳ ಗ್ರಾಮದ ಹಿರಿದೇವಮ್ಮ ದೇವಾಲಯದ ಬಳಿ ಎಕ್ಸ್‌ಪ್ರೆಸ್ ಹೈವೆ ಕಾಮಗಾರಿ ತಡೆದ ರೈತರು ಕೇವಲ ಹೈವೇ ನಿರ್ಮಾಣ ಮಾಡಿದರೆ ಸಾಲದು, ರಸ್ತೆ ಕಾಮಗಾರಿ ನಡೆಯುವ ಮುಂಚೆ ನಡೆದ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದಂತೆ ಸರ್ವಿಸ್ ರಸ್ತೆ ಕೂಡ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಸ್ಥಳಕ್ಕೆ ಬಂದ ಅಧಿಕಾರಿಗಳು ಪ್ರತಿಭಟನಾಕಾರರ ಮನವಿ ಆಲಿಸಿದರು. ಸರ್ವಿಸ್ ರೋಡ್ ಪ್ರಸ್ತಾಪ ಈ ಯೋಜನೆಯಲ್ಲಿ ಇಲ್ಲ, ನಿಮ್ಮ ಮನವಿಯನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು. ಇದಕ್ಕೆ ಒಪ್ಪದ ರೈತರು ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಬರುವ ತನಕ ಕಾಮಗಾರಿ ಪ್ರಾರಂಭಿಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.

ರೈತ ಯುವ ಮುಖಂಡ ಬೆಳಗೊಳ ಸುನೀಲ್ ಮಾತನಾಡಿ, ವರ್ಷದ ಹಿಂದೆ ಬೆಳಗೊಳ ಗ್ರಾಮದ ಸಮುದಾಯ ಭವನದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸರ್ವಿಸ್ ರೋಡ್ ಮಾಡುವುದಾಗಿ ತಿಳಿಸಿದ್ದರು. ಈಗ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಬೇಕಾಬಿಟ್ಟಿ ರಸ್ತೆ ನಿರ್ಮಾಣ ಮಾಡುತ್ತ ರೈತರಿಗೆ ತೊಂದರೆ ಕೊಡುತ್ತಿದ್ದಾರೆ. ರಸ್ತೆಗಳಿಗೆ ಸರಿಯಾದ ಸಂಪರ್ಕ ರಸ್ತೆ ನಿರ್ಮಿಸುತ್ತಿಲ್ಲ, ಈಗ ಸರ್ವಿಸ್ ರಸ್ತೆ ಕೂಡ ನಿರ್ಮಿಸುವುದಿಲ್ಲ ಎಂದು ಬೇಜವಾಬ್ದಾರಿ ಉತ್ತರ ನೀಡುತ್ತಾರೆ. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದು ರೈತರ ಸಮಸ್ಯೆ ಬಗೆಹರಿಸದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ಗಿರೀಶ್, ಹರೀಶ್ ತಾಂಡವೇಶ್ವರ್, ವೆಂಕಟೇಶ್, ಹರ್ಷ, ವಿನಯ್, ಚೆಲುವೇಗೌಡ, ಸೇರಿದಂತೆ ಬೊಮ್ಮೂರು ಅಗ್ರಹಾರ, ಪಾಲಹಳ್ಳಿ, ಕಾರೇಕುರ, ಬೆಳಗೊಳ, ಹುಲಿಕೆರೆ, ಬಸ್ತಿಪುರ ಗ್ರಾಮಗಳ ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net