

ಉಡುಪಿ: ಸಿದ್ದರಾಮಯ್ಯ ಉಪಮುಖ್ಯಮಂತ್ರಿಯಾಗಿದ್ದಾಗ ಬಾಮೈದ 3 ಎಕ್ರೆ ಜಾಗ ಖರೀದಿ ಮಾಡಿದ್ದಾರೆ. ಅವರ ಹಣದಿಂದಲೇ ಖರೀದಿಯಾಗಿದೆಯೇ ಎಂಬ ಬಗ್ಗೆ ಸಂಶಯವಿದೆ. ಬೆಲೆ ಬಾಳುವ ಸೈಟ್ಗಳನ್ನು ಪಡೆಯುವ ಉದ್ದೇಶದಿಂದಲೇ ಕಡಿಮೆ ಬೆಲೆ ಸೈಟ್ ಗಳನ್ನು ಮೂಡಕ್ಕೆ ನೀಡಿದ್ದಾರೆ. ಮುಖ್ಯಮಂತ್ರಿಗಳ ಸ್ವಜನಪಕ್ಷಪಾತ ಹಾಗೂ ಭ್ರಷ್ಟಾಚಾರ ಆರೋಪ ಹಿನ್ನೆಲೆಯಲ್ಲಿ ಅವರು ತಕ್ಷಣ ರಾಜೀನಾಮೆ ಕೊಡಬೇಕು ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ಜಿಲ್ಲಾ ಬಿಜೆಪಿ ಕಚೇರಿ ಮುಂಭಾಗ ಸೋಮವಾರ ಬಿಜೆಪಿ ವತಿಯಿಂದ ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಮಾತನಾಡಿ, ಸಿಎಂ ಸಿದ್ದರಾಮಯ್ಯ ಅವರು ಮಿಸ್ಟರ್ ಕ್ಷೀನ್ ಎಂಬ ಸ್ವಯಂಘೋಷಿತ ಬಿರುದುಗಳನ್ನು ಘೋಷಿಸಿಕೊಂಡ ವ್ಯಕ್ತಿ. ಹಿಂದಿನ ರಾಜ್ಯಪಾಲರು ಯಡಿಯೂರಪ್ಪನವರ ಮೇಲೆ ಆದೇಶ ಹೊರಡಿಸಿದಾಗ ಸಿದ್ದರಾಮಯ್ಯನವರು ರಾಜಿನಾಮೆಗೆ ಆಗ್ರಹಿಸಿದ್ದರು. ಪ್ರತಿಭಟನೆ ಮಾಡುವ ಮೊದಲೇ ರಾಜೀನಾಮೆ ಕೊಡುತ್ತಿದ್ದೇ ಎಂದಿದ್ದರು. ಆದರೀಗ ರಾಜೀನಾಮೆ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಹೇಳಿದರು.
ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ, ಸಿದ್ದರಾಮಯ್ಯ ಹಗರಣಗಳ ಸರದಾರರಾಗಿದ್ದಾರೆ. ಮೂಡ ಹಗರಣ, ವಾಲ್ಮೀಕಿ ಹಗರಣದ ಮುಖ್ಯ ರೂವಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ. ನಿವೃತ್ತಿ ಅಂಚಿನಲ್ಲಿರುವ ಸಿದ್ದರಾಮಯ್ಯನವರು ಹಾಗೂ ಅವರ ನೇತೃತ್ವದ ಸರ್ಕಾರ ಕರ್ನಾಟಕ ರಾಜ್ಯವನ್ನು ದೋಚುವ ಕೆಲಸಕ್ಕೆ ಕೈ ಹಾಕಿದೆ. ಅವರು ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬರಬೇಕು ಎಂದು ಆಗ್ರಹಿಸಿದರು.
ಪ್ರಮುಖರಾದ ಮಟ್ಟಾರ್ ರತ್ನಾಕರ್ ಹೆಗ್ಡೆ, ಶ್ರೀನಿಧಿ ಹೆಗ್ಡೆ, ಕಿದಿಯೂರು ಉದಯ್ ಕುಮಾರ್ ಶೆಟ್ಟಿ, ವೀಣಾ ಶೆಟ್ಟಿ, ರೇಶ್ಮಾ ಶೆಟ್ಟಿ, ಸಂಧ್ಯಾ ರಮೇಶ್, ಗೀತಾಂಜಲಿ ಸುವರ್ಣ, ಶ್ರೀಶಾ ನಾಯಕ್ ಪೆರ್ಣಂಕಿಲ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು. ಪ್ರತಿಭಟನೆ ಬಳಿಕ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಳಿತು ರಸ್ತೆ ತಡೆ ನಡೆಸಿದರು.