

ಮುರಗುಂಡಿ: ಗ್ರಾಮದಲ್ಲಿ ಬಸ್ ನಿಲುಗಡೆಯಾಗದ ಹಿನ್ನೆಲೆಯಲ್ಲಿ ಶಾಲೆ, ಕಾಲೇಜಿಗೆ ತೆರಳಲು ತೊಂದರೆಯಾಗುತ್ತಿದೆ ಎಂದು ಆಗ್ರಹಿಸಿದ ವಿದ್ಯಾರ್ಥಿಗಳು ಬುಧವಾರ ಒಂದು ಗಂಟೆ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ಗ್ರಾಮ ಸಮೀಪದ ಏಳೆಂಟು ಹಳ್ಳಿಗಳಿಗೆ ಕೇಂದ್ರ ಸ್ಥಾನವಾಗಿದ್ದು, ನಿತ್ಯ ಅಥಣಿಗೆ ತೆರಳಲು ಈ ಮಾರ್ಗದ ಮೂಲಕ ಹೋಗಬೇಕು. ಆದರೆ, ಬಸ್ ನಿಲ್ಲ್ಲಿಸದೇ ಹೋಗುತ್ತಿರುವುದರಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಹಲವು ಬಾರಿ ಸಂಬಂಧಪಟ್ಟವರ ಗಮನಕ್ಕೆ ತಂದರೂ ಕ್ರಮಕ್ಕೆ ಮುಂದಾಗುತ್ತಿಲ್ಲ. ಗ್ರಾಮದಲ್ಲಿ ಸಮರ್ಪಕ ಬಸ್ ನಿಲುಗಡೆಗೆ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಪಟ್ಟುಹಿಡಿದರು. ಬಳಿಕ ಕೆಎಸ್‌ಆರ್‌ಟಿಸಿ ಅಥಣಿ ವ್ಯವಸ್ಥಾಪಕ ಎನ್.ಎಂ.ಕೇರಿ ಸ್ಥಳಕ್ಕೆ ಆಗಮಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಬಳಿಕ ಪ್ರತಿಭಟನೆ ಕೈಬಿಡಲಾಯಿತು. ಆದರ್ಶ ಗಸ್ತಿ, ಕುಮಾರ ಗಸ್ತಿ, ರೋಹಿತ ಗಸ್ತಿ, ಆನಂದ ಸನದಿ, ಅರುಣ ಹಾವರದ್ಧಿ, ಆಕಾಶ ಕುಂಬಾರಗುತ್ತಿ, ರೋಹಿತ ಕುಶನಾಳೆ, ಮಾರುತಿ ಸಿಂಗಣವರ ಇತರರಿದ್ದರು.