

ಮುದ್ದೇಬಿಹಾಳ: ಬಸ್ ಸೌಲಭ್ಯ ಮತ್ತು ಶಾಲೆ, ಕಾಲೇಜು ಸಮಯಕ್ಕೆ ಸರಿಯಾಗಿ ಬಸ್ ಓಡಿಸುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಮುದ್ದೇಬಿಹಾಳ ಶಾಖೆ ವತಿಯಿಂದ ವಿದ್ಯಾರ್ಥಿಗಳು ಶುಕ್ರವಾರ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಘಟಕದ ಎದುರು ಪ್ರತಿಭಟನೆ ನಡೆಸಿದರು.
ಈಗಾಗಲೇ ಬಸ್ ಸೌಲಭ್ಯ ಕಲ್ಪಿಸುವಂತೆ ಸತತ ಮೂರು ಬಾರಿ ಸಾರಿಗೆ ಸಂಸ್ಥೆಯ ಘಟಕ ವ್ಯವಸ್ಥಾಪಕರಿಗೆ ಮನವಿ ಮಾಡಿಕೊಂಡಿದ್ದರೂ ಪ್ರಯೋಜನ ಆಗಿಲ್ಲ. ಪಟ್ಟಣದ ಕಾಲೇಜುಗಳು ಪಟ್ಟಣ ವ್ಯಾಪ್ತಿಯ ಹೊರವಲಯದಲ್ಲಿವೆ. ಹೀಗಾಗಿ ಬಸ್ ನಿಲ್ದಾಣದಿಂದ ಆಯಾ ಕಾಲೇಜುಗಳಿಗೆ ಸಕಾಲಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆ ಬಗೆಹರಿಸಲು ಘಟಕ ವ್ಯವಸ್ಥಾಪಕರು ಈಗಲಾದರೂ ಕ್ರಮ ಕೈಕೊಳ್ಳಬೇಕು ಎಂದು ಆಗ್ರಹಿಸಿದರು.
ಆಲಮಟ್ಟಿ ರಸ್ತೆಯ ಭೋಸಲೆ ಬಯೋನೀಮ್ ಹಿಂಭಾಗದಲ್ಲಿರುವ ಸರ್ಕಾರಿ ಪದವಿ ರೆಸಿಡೆನ್ಸಿಯಲ್ ಕಾಲೇಜಿಗೆ, ಆಲಮಟ್ಟಿ ರಸ್ತೆ ಪಕ್ಕದಲ್ಲಿರುವ ಸರ್ಕಾರಿ ಪದವಿ ಕಾಲೇಜಿಗೆ ಆಲಮಟ್ಟಿ ಮಾರ್ಗದಲ್ಲಿ ಹೋಗಿ ಬರುವ ಎಲ್ಲ ಬಸ್‌ಗಳಿಗೆ ನಿಲುಗಡೆ ಕಲ್ಪಿಸಬೇಕು. ಬೆಳಗ್ಗೆ 7 ಗಂಟೆಗೆ ಮುದ್ದೇಬಿಹಾಳದಿಂದ ತಾಳಿಕೋಟೆ ಭಾಗಕ್ಕೆ ಬಸ್ ಸಂಚರಿಸುವ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿ ಘಟಕ ವ್ಯವಸ್ಥಾಪಕ ಬಿ.ಬಿ. ಚಿತ್ತವಾಡಗಿ ಅವರಿಗೆ ಮನವಿ ಸಲ್ಲಿಸಲಾಯಿತು.
ಎಬಿವಿಪಿ ತಾಲೂಕು ಸಂಚಾಲಕ ಶಿವನಗೌಡ ಬಿರಾದಾರ, ಎಬಿವಿಪಿ ನಗರ ಕಾರ್ಯದರ್ಶಿ ಗಂಗಾ ಹಡಪದ, ರೇವಣಸಿದ್ದ ಮೇಟಿ, ನಿಂಗಪ್ಪ ಒಂದಗನೂರ, ಹುಲಗೇಶ ಹೊಸಮನಿ, ನವೀನ ಹುಲಗಣ್ಣಿ, ಓಂಕಾರ ಪವಾರ, ನೀಲಕಂಠ ಪವಾರ, ರಮೇಶ ಹೂಗಾರ, ಪವಿತ್ರಾ ಚವ್ಹಾಣ, ಅಮರನಾಥ ಪಟ್ಟೇದಾರ, ವೀರೇಶ ಪತ್ತಾರ, ಮಹೇಶ ದೊಡಮನಿ ಇತರರಿದ್ದರು.