ರಸ್ತೆ ಡಾಂಬರೀಕರಣ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ

2
Published on

ಮೈಸೂರು: ರಾಮಕೃಷ್ಣ ನಗರದ ಸಾಯಿ ಬಾಬಾ ವೃತ್ತದ ಬಳಿ ರಸ್ತೆ ದುರಸ್ತಿ ವಿಳಂಬದಿಂದ ತೊಂದರೆ ಆಗುತ್ತಿದೆ ಎಂದು ಸ್ಥಳೀಯರು ಹಾಗೂ ವಿದ್ಯಾರ್ಥಿಗಳು ಶನಿವಾರ ಪ್ರತಿಭಟನೆ ನಡೆಸಿದರು.

ರಾಮಕೃಷ್ಣ ನಗರದ 58ನೇ ವಾರ್ಡ್‌ನಲ್ಲಿ ಸಾಯಿಬಾಬಾ ವೃತ್ತದ ಬಳಿ ಒಳಚರಂಡಿ ಕಾಮಗಾರಿಗಾಗಿ ರಸ್ತೆಯನ್ನು ಅಗೆಯಲಾಗಿದೆ. ಆದರೆ ಡಾಂಬರೀಕರಣ, ಉಳಿದ ಕಾಮಗಾರಿ ಪೂರ್ಣಗೊಳಿಸದೆ ಜನರಿಗೆ ತೊಂದರೆ ಅಗುತ್ತಿದೆ. ರಸ್ತೆ ಧೂಳುಮಯವಾಗಿದ್ದು, ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ದೂರಿದರು.

ಸುತ್ತಮುತ್ತಲಿನ ಶಾಲಾ, ಕಾಲೇಜುಗಳು, ಆಸ್ಪತ್ರೆ, ಹೋಟೆಲ್‌ಗಳು ಇದ್ದು, ಧೂಳು ಎಲ್ಲೆಡೆ ಆವರಿಸುತ್ತಿದೆ. ಇದರಿಂದ ಊಟ, ತಿಂಡಿ ಮಾಡಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ಉಂಟಾಗಿದೆ ಎಂದು ಆರೋಪಿಸಿದರು.

ನಗರಪಾಲಿಕೆಯಿಂದ ಒಳಚರಂಡಿ ಕಾಮಗಾರಿ ಕಳೆದ 6 ತಿಂಗಳಿಂದ ನಡೆದಿದ್ದು ಕಾಮಗಾರಿ ಮುಗಿದಿದೆ. 4-5 ತಿಂಗಳಿಂದ ರಸ್ತೆಗಳಿಗೆ ಡಾಂಬರೀಕರಣವಾಗಿಲ್ಲ ಎಂದರು.

ಮುಖ್ಯರಸ್ತೆಯೇ ಈಗ ಗುಂಡಿ ಬಿದ್ದಿದ್ದು, ಧೂಳು ತಡೆಯಲು ಸಾಧ್ಯವಾಗುತ್ತಿಲ್ಲ. ನೃಪತುಂಗ ಕನ್ನಡ ಶಾಲೆ, ವಿಶ್ವಮಾನವ ಶಾಲೆ, ರಾಮಕೃಷ್ಣ ವಿದ್ಯಾಕೇಂದ್ರ, ಆಸ್ಪತ್ರೆ, ಬಾಲಕಿಯರ ವಸತಿಗೃಹ, ದೇವಸ್ಥಾನವಿದ್ದು, ಇಲ್ಲಿ ನಿತ್ಯ ವಿದ್ಯಾರ್ಥಿಗಳು, ಮಕ್ಕಳು ಸಾರ್ವಜನಿಕರಿಗೆ ತುಂಬ ತೊಂದರೆಯಾಗುತ್ತಿದೆ. ಜನರು ಓಡಾಡುವಾಗ ಧೂಳಿನಿಂದ ಉಸಿರುಗಟ್ಟಿ ಕಾಯಿಲೆಗಳು ಬೀಳುವ ಪರಿಸ್ಥಿತಿ ಇರುತ್ತದೆ ಮತ್ತು ಹಿರಿಯ ನಾಗರಿಕರು ಅಲ್ಲಿನ ಪಾರ್ಕ್‌ನಲ್ಲಿ ಓಡಾಡಲು ತುಂಬ ತೊಂದರೆಯಾಗಿದೆ. ಇದರ ಬಗ್ಗೆ ಸ್ಥಳೀಯ ಶಾಲೆ, ಹಿರಿಯ ನಾಗರಿಕರು, ಸ್ಥಳೀಯರು ಅನೇಕ ಬಾರಿ ಮನವಿಗಳನ್ನು ಸಲ್ಲಿಸಿದ್ದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಎಂದು ದೂರಿದರು.

ಆದ್ದರಿಂದ ತಕ್ಷಣವೇ ರಸ್ತೆ ದುರಸ್ತಿಗೊಳಿಸಿ ಡಾಂಬರೀಕರಣಗೊಳಿಸುವಂತೆ ಒತ್ತಾಯಿಸಿ, ನಗರಪಾಲಿಕೆ ವಲಯ ಅಧಿಕಾರಿಗೆ ಮನವಿ ಸಲ್ಲಿಸಿದರು. ಸ್ಥಳೀಯ ನಿವಾಸಿಗಳಾದ ರಾಜೇಶ್, ಫಣೀಶ್, ರಾಕಿ, ಕುಮಾರ್ ಜೋಗಿ, ಮಹೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net