ರಸ್ತೆಗೆ ಡಾಂಬರೀಕರಣಕ್ಕೆ ಆಗ್ರಹಿಸಿ ಪ್ರತಿಭಟನೆ

Protest demanding asphalting of the road
ಮುದ್ದೇಬಿಹಾಳ ಪಟ್ಟಣದಲ್ಲಿ ಮಹೆಬೂಬ ನಗರ, ಬನಶಂಕರಿ ನಗರದ ನಿವಾಸಿಗಳು ಪ್ರತಿಭಟನೆ ನಡೆಸಿದರು.
Published on

ಮುದ್ದೇಬಿಹಾಳ: ಮುಸ್ಲಿಮರೇ ಹೆಚ್ಚು ವಾಸಿಸುವ ಮಹೆಬೂಬ ನಗರದ ವ್ಯಾಪ್ತಿಯ ರಸ್ತೆಗೆ ಡಾಂಬರೀಕರಣ ಮಾಡದೆ ನಿವಾಸಿಗಳ ಜತೆ ಚೆಲ್ಲಾಟವಾಡುತ್ತಿರುವ ಪಿಡಬ್ಲುೃಡಿ ಅಧಿಕಾರಿಗಳು, ಗುತ್ತಿಗೆದಾರರ ಮೇಲೆ ಕ್ರಮ ಜರುಗಿಸಿ ಶೀಘ್ರ ರಸ್ತೆ ಡಾಂಬರೀಕರಣ ಮಾಡಬೇಕು ಎಂದು ಮಹೆಬೂಬ ನಗರದ ಮುಖಂಡ ಗುಲಾಂಮೊಹ್ಮದ ದೇದಾರ ಆಗ್ರಹಿಸಿದರು.

ಪಟ್ಟಣದ ಬನಶಂಕರಿ ವೃತ್ತದಿಂದ ದಲಿತ ಬಾಂಧವರ ಸ್ಮಶಾನದವರೆಗಿನ ನಾಲತವಾಡ ರಸ್ತೆಗೆ ಡಾಂಬರೀಕರಣ ಮಾಡುವಂತೆ ಆಗ್ರಹಿಸಿ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಮಹೆಬೂಬ ನಗರದ ನಿವಾಸಿಗಳು ಸೋಮವಾರದಿಂದ ಹಮ್ಮಿಕೊಂಡಿರುವ ಹೋರಾಟದ ನೇತೃತ್ವ ವಹಿಸಿ ಅವರು ಮಾತನಾಡಿದರು.

ಅಧಿಕಾರಿಗಳಿಗೆ ಎರಡು ಬಾರಿ ಲಿಖಿತ ಮನವಿ ಮಾಡಿದ್ದೇವೆ. ಬೆಳಗಾವಿಯಿಂದ ಇಲಾಖೆಯ ಎಸ್‌ಇ ಅರುಣ ಪಾಟೀಲ ಅವರು ಭೇಟಿ ನೀಡಿ ಡಾಂಬರೀಕರಣ ಮಾಡಿಸಲು ಸೂಚಿಸಿದ್ದರೂ ಅದಕ್ಕೆ ಗುತ್ತಿಗೆದಾರರು ಕ್ಯಾರೆ ಎಂದಿಲ್ಲ. ಒಮ್ಮೆ ರಸ್ತೆ ತಡೆ ಮಾಡಿದ್ದೇವೆ. ಈ ಹೋರಾಟ ಯಾವುದೇ ರಾಜಕೀಯ ನಾಯಕರ ವಿರುದ್ಧವಲ್ಲ. ಡಾಂಬರೀಕರಣ ಮಾಡುವವರೆಗೂ ಈ ಹೋರಾಟ ಮುಂದುವರಿಸುವುದಾಗಿ ಹೇಳಿದರು.

ಮುಖಂಡ ಎಚ್.ಆರ್.ಬಾಗವಾನ, ಹೋರಾಟಗಾರ ಮಂಜುನಾಥಸ್ವಾಮಿ ಕುಂದರಗಿ ಮಾತನಾಡಿ, ಮುದ್ದೇಬಿಹಾಳ ಪಟ್ಟಣ ಸಂಪರ್ಕಿಸುವ ನಾಲ್ಕು ರಸ್ತೆಗಳಲ್ಲೂ ಒಳ್ಳೆಯ ರಸ್ತೆಗಳಾಗಿವೆ. ಆದರೆ ಅಲ್ಪಸಂಖ್ಯಾತರೇ ಹೆಚ್ಚು ವಾಸಿಸುವ ಮಹೆಬೂಬ ನಗರದ ವಾರ್ಡ್ ವ್ಯಾಪ್ತಿಯಲ್ಲಿ ರಸ್ತೆಗೆ ಡಾಂಬರೀಕರಣ ಮಾಡದೆ ಅನ್ಯಾಯ ಮಾಡಲಾಗುತ್ತಿದೆ ಎಂದರು.

ಯುವ ಮುಖಂಡರಾದ ಬಾಬಾಪಟೇಲ್ ಗುಡ್ನಾಳ, ಆಮ್ ಆದ್ಮಿ ಪಕ್ಷದ ಮುಖಂಡ ಮಹೆಬೂಬ ಹಡಲಗೇರಿ ಮಾತನಾಡಿ, ಪಿಡಬ್ಲುೃಡಿ ಅಧಿಕಾರಿಗಳು ತ್ವರಿತವಾಗಿ ಡಾಂಬರೀಕರಣ ಮಾಡದಿದ್ದರೆ ಅವರ ಮನೆ, ಕಚೇರಿ ಎದುರಿಗೆ ಅರೆಬೆತ್ತಲೆ ಧರಣಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮುಖಂಡ ಕೆ.ಎಂ.ರಿಸಾಲ್ದಾರ್, ಮಹೆಬೂಬ ನಗರದ ನಿವಾಸಿಗಳಾದ ಅಲ್ಲಾಭಕ್ಷ ಟಕ್ಕಳಕಿ, ಮಹ್ಮದ ನಾಗರಾಳ, ರಫೀಕ ಗೊಳಸಂಗಿ, ಮಹೆಬೂಬ ನಬಿವಾಲೆ, ಭಾಷಾಸಾಬ ಕೊಣ್ಣೂರ, ಮಂಜೂರಲಿ ಕೂಡಗಿ, ಬಾಬಾ ಕಿತ್ತೂರ, ಮಹ್ಮದಯೂಸೂ ಹಿರೇಮನಿ, ಮಹ್ಮದ್ ಗೌಸ ಶೇಖ, ಮಲ್ಲು ಚೌಧರಿ, ನಯೀಮ್ ಹಳ್ಳೂರ, ಇಸ್ಮಾಯಿಲ್ ಗೋಲಂದಾಜ, ಆಸೀ ಹಳ್ಳೂರ, ಶಬ್ಬೀರ ಸಂಕನಾಳ ಇತರರಿದ್ದರು.

ಪೊಲೀಸ್ ಭದ್ರತೆ

ಮುದ್ದೇಬಿಹಾಳ ಪಟ್ಟಣದ ಮಹೆಬೂಬ ನಗರದ ದಲಿತ ಸಮಾಜದವರ ಸ್ಮಶಾನದಿಂದ ಇಂದಿರಾ ವೃತ್ತ, ಬಜಾರ್ ರಸ್ತೆ, ಬಸವೇಶ್ವರ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಅಂಬೇಡ್ಕರ್ ವೃತ್ತ, ಕಿತ್ತೂರು ಚನ್ನಮ್ಮ ಮಹಾದ್ವಾರದ ಮೂಲಕ ತಹಸೀಲ್ದಾರ್ ಕಚೇರಿ ಆವರಣಕ್ಕೆ ಪ್ರತಿಭಟನಾಕಾರರು ಆಗಮಿಸಿದರು. ಪ್ರತಿಭಟನೆ ವೇಳೆ ಪಿಎಸ್‌ಐ ಮುಶಾಪುರಿ ಹಾಗೂ ಪೊಲೀಸ್ ಸಿಬ್ಬಂದಿ ಬಿಗಿ ಬಂದೋಬಸ್ತ್ ಒದಗಿಸಿದ್ದರು.

ಕಾಣದ ವಾರ್ಡ ಸದಸ್ಯರು

ಮಹೆಬೂಬ ನಗರ, ಬನಶಂಕರಿ ನಗರ ವಾರ್ಡ್ ಪ್ರತಿನಿಧಿಸುವ ಪುರಸಭೆ ಚುನಾಯಿತ ಸದಸ್ಯರಿದ್ದರೂ ಜನಪರ ಹಾಗೂ ಜನರಿಗೆ ಅಗತ್ಯವಾಗಿರುವ ನಾಲತವಾಡ ರಸ್ತೆಯ ಡಾಂಬರೀಕರಣದ ಹೋರಾಟಕ್ಕೆ ಕನಿಷ್ಠ ಪಕ್ಷ ಬೆಂಬಲ ಕೊಡುವ ಗೋಜಿಗೂ ಈ ಸದಸ್ಯರು ಬಾರದೇ ಇರುವುದು ತೀವ್ರ ಚರ್ಚೆಗೆ ಕಾರಣವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net