

ಮೈಸೂರು: ಮಹಿಳಾ ಕುಸ್ತಿಪಟುಗಳ ಮೇಲಿನ ಲೈಂಗಿಕ ಕಿರುಕುಳದ ಆರೋಪಿ, ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ಬಂಧಿಸುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಭಾರತ ವಿದ್ಯಾರ್ಥಿ ಫೆಡರೇಷನ್ ಸಂಘಟನೆಗಳಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.
ಭಾರತ ಕುಸ್ತಿ ಫೆಡರೇಷನ್ ಮುಖ್ಯಸ್ಥ ಹಾಗೂ ಇನ್ನಿತರ ಸಿಬ್ಬಂದಿ, ಅಪ್ರಾಪ್ತೆಯರು ಸೇರಿದಂತೆ ಖ್ಯಾತ ಮಹಿಳಾ ಕುಸ್ತಿ ಪಟುಗಳಿಗೆ ಲೈಂಗಿಕ ಕಿರುಕುಳ ಹಾಗೂ ಹಿಂಸೆಗೆ ಒಳಪಡಿಸಿರುವುದು ಅತ್ಯಂತ ಅಘಾತಕಾರಿ ಮತ್ತು ದೇಶವೇ ತಲೆತಗ್ಗಿಸುವಂಥ ಘಟನೆಯಾಗಿದೆ. ಬೆೇಟಿ ಬಚಾವೋ ಬೆೇಟಿ ಪಡಾವೋ ಎಂಬ ಪ್ರಚಾರ ಮಾಡುವ ಮೋದಿ ನೇತೃತ್ವದ ಒಕ್ಕೂಟ ಸರ್ಕಾರ ಹೀನ ಅಪರಾಧದ ಆರೋಪಿ ಬಿಜೆಪಿ ಸಂಸದನನ್ನು ರಕ್ಷಿಸುತ್ತಿರುವುದು ನಾಚಿಕೆಗೇಡಿನ ಸಂಗತಿ. ಹೀಗಾಗಿ ದೂರಿನ ಆಧಾರದಲ್ಲಿ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ನೊಂದ ಮಹಿಳಾ ಕ್ರೀಡಾಪಟುಗಳಿಗೆ ರಕ್ಷಣೆ ಒದಗಿಸಬೇಕಾಗಿದ್ದ ಸರ್ಕಾರ ಪೊಲೀಸ್ ಪಡೆಗಳನ್ನು ಬಳಸಿ ನ್ಯಾಯಕ್ಕಾಗಿ ಪ್ರತಿಭಟಿಸುತ್ತಿರುವ ಕ್ರೀಡಾಪಟುಗಳ ಮೇಲೆ ದಮನಕಾರಿ ಕ್ರಮಗಳನ್ನು ಅನುಸರಿಸುತ್ತಿದೆ. ಇತ್ತೀಚೆಗೆ ದೆಹಲಿ ಪೊಲೀಸರು ಕುಡಿದು ಬಂದು ಪ್ರತಿಭಟನಾಕಾರರ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಇಷ್ಟೆಲ್ಲಾ ಕಿರುಕುಳಗಳ ಮಧ್ಯೆಯೂ ನ್ಯಾಯ ಸಿಗುವವರೆಗೆ ಹೋರಾಟ ನಿಲ್ಲಿಸುವುದಿಲ್ಲ ಎಂದು ಪ್ರತಿಭಟಿಸುತ್ತಿರುವುದು ಪ್ರಶಂಸನೀಯ ಹಾಗೂ ಅಭಿನಂದನಾರ್ಹವಾಗಿದೆ ಎಂದರು.
ಲೈಂಗಿಕ ಕಿರುಕುಳ ಹಾಗೂ ಹಿಂಸೆ ಕೊನೆಗಾಣಬೇಕು. ಇದಕ್ಕಾಗಿ ದೇಶದ ಎಲ್ಲ ನಾಗರಿಕರು ಈ ಪ್ರತಿಭಟನೆ ಬೆಂಬಲಿಸಬೇಕು. ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕ ಗೆದ್ದು ನಮ್ಮ ದೇಶಕ್ಕೆ ಕೀರ್ತಿ ತಂದವರ ಮೇಲೆ ಇಷ್ಟು ಕಿರುಕುಳ ಆದರೆ ಇನ್ನು ಸಾಮಾನ್ಯ ಮಹಿಳೆಯರ ಹಾಗೂ ಹೆಣ್ಣು ಮಕ್ಕಳ ಸುರಕ್ಷತೆ ಕೇಳುವುದು ಹೇಗೆ ಎಂಬ ಪ್ರಶ್ನೆಯನ್ನು ನಾವೆಲ್ಲರೂ ಹಾಕಿಕೊಳ್ಳಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ದೇಶಕ್ಕೆ ಕೀರ್ತಿ ತರುವ ಸಾಮರ್ಥ್ಯದ ಕ್ರೀಡಾಪಟುಗಳ ಆತಸ್ಥೈರ್ಯ ಕುಂದಿಸುವ ಕೆಲಸವನ್ನು ಈ ಕೂಡಲೇ ಬಿಜೆಪಿ ಸರ್ಕಾರ ನಿಲ್ಲಿಸಬೇಕು. ತಕ್ಷಣವೇ ಪೋಸ್ಕೋ ಸೇರಿದಂತೆ ಮಹಿಳಾ ಕ್ರೀಡಾಪಟುಗಳ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಿಂಸೆ ನಡೆಸಿರುವ ಆರೋಪಿ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ಅವರನ್ನು ಭಾರತ ಕುಸ್ತಿ ಫೆಡರೇಷನ್ ಅಧ್ಯಕ್ಷ ಸ್ಥಾನದಿಂದ ವಜಾ ಮಾಡಬೇಕು. ನಿಷ್ಪಕ್ಷಪಾತ ತನಿಖೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ಸಿಟಿಯುನ ಜಿಲ್ಲಾಧ್ಯಕ್ಷ ಜಿ.ಜಯರಾಂ, ಕಾರ್ಯದರ್ಶಿ ಬಾಲಾಜಿ ರಾವ್, ಪ್ರಾಂತ ರೈತ ಸಂಘದ ಕಾರ್ಯದರ್ಶಿ ಜಗದೀಶ್ ಸೂರ್ಯ, ಅಧ್ಯಕ್ಷ ಚಿಕ್ಕಣ್ಣೇಗೌಡ, ಭಾರತ ವಿಧ್ಯಾರ್ಥಿ ಫೆಡರೇಶನ್‌ನ ಕಾರ್ಯದರ್ಶಿ ಅಭಿ, ನಿಖಿಲ, ಕೆ.ಬಸವರಾಜ್, ಲ.ಜಗನ್ನಾಥ್, ಪಿಯುಸಿಎಲ್‌ನ ರತಿರಾವ್, ನಾ.ದಿವಾಕರ, ಪುರುಷೋತ್ತಮ್, ಚಂದ್ರಶೇಖರ್, ರಾಜೇಂದ್ರ, ಬಸವಯ್ಯ, ಶಿವಕುಮಾರ್, ಸಿದ್ದಯ್ಯ, ಬಲರಾಂ, ಮಹದೇವಯ್ಯ, ಶ್ರೀಕಂಠ ಇತರರು ಭಾಗವಹಿಸಿದ್ದರು.