

ಶಿವಮೊಗ್ಗ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಅರಣ್ಯ ಸಚಿವ ಈಶ್ವರ ಖಂಡ್ರೆ ಕುರಿತು ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಬಂಧಿಸುವಂತೆ ಆಗ್ರಹಿಸಿ ಗುರುವಾರ ಶಿವಮೊಗ್ಗ ನಗರ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳು ಎಸ್ಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ತೀರ್ಥಹಳ್ಳಿಯಲ್ಲಿ ಮಂಗಳವಾರ ಡಾ. ಕಸ್ತೂರಿ ರಂಗನ್ ವರದಿ ವಿರೋಧಿಸಿ ಬಿಜೆಪಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಶಾಸಕ ಆರಗ ಜ್ಞಾನೇಂದ್ರ ಅವರು ಮಲ್ಲಿಕಾರ್ಜುನ ಖರ್ಗೆ ಮತ್ತು ಈಶ್ವರ ಖಂಡ್ರೆ ಬಗ್ಗೆ ಅಸಭ್ಯವಾಗಿ ಹೇಳಿಕೆ ನೀಡಿದ್ದು ಕೋಟ್ಯಂತರ ಕಾರ್ಯಕರ್ತರ, ಅಭಿಮಾನಿಗಳ ಮನಸ್ಸಿಗೆ ಘಾಸಿಯನ್ನುಂಟು ಮಾಡಿದೆ ಎಂದು ದೂರಿದರು.
ಗೃಹ ಸಚಿವ ಸ್ಥಾನದಂತಹ ಹುದ್ದೆ ನಿಭಾಯಿಸಿದ್ದ ಆರಗ ಜ್ಞಾನೇಂದ್ರ ಅವರು ಮಲ್ಲಿಕಾರ್ಜುನ ಖರ್ಗೆ ಅವರ ಬಣ್ಣ ಹಾಗೂ ತಲೆಕೂದಲನ್ನು ಉದಾಹರಣೆ ಕೊಟ್ಟಿದ್ದಾರೆ. ಅರಣ್ಯ ಸಚಿವರಿಗೆ ಮರ-ಗಿಡ ಅಂದರೆ ಏನೆಂದೇ ಗೊತ್ತಿಲ್ಲ ಎಂದು ಅಪಮಾನಿಸಿದ್ದು ನಮ್ಮ ದುರದೃಷ್ಟ. ಕೂಡಲೆ ಆರಗ ಜ್ಞಾನೇಂದ್ರ ವಿರುದ್ಧ ಕೇಸ್ ದಾಖಲಿಸಿ, ಬಂಧಿಸಬೇಕು ಹಾಗೂ ಪಕ್ಷದ ಕಾರ್ಯಕರ್ತರಲ್ಲಿ ಬಹಿರಂಗ ಕ್ಷಮೆಯಾಚಿಸಬೇಕು. ಇಲ್ಲದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್‌ಗೆ ಮನವಿ ಸಲ್ಲಿಸಿದರು.
ನಗರ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲೀಂ ಪಾಶಾ, ಸುವರ್ಣಾ ನಾಗರಾಜ್, ಸ್ಟೆಲ್ಲಾ ಮಾರ್ಟಿನ್, ಶಮೀಮ್ ಬಾನು, ಚಂದ್ರಕಲಾ, ರಜಿಯಾ, ಮುಜೀಬ್, ಸುಹೇಲ್, ಮಂಜುನಾಥ್, ಅರ್ಚನಾ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿದ್ದರು.