ವಾರ್ಷಿಕ ಪರೀಕ್ಷೆ ನಡೆಸಲು ಆಗ್ರಹಿಸಿ ಪ್ರತಿಭಟನೆ

6-hvr-03
Published on

ಹಾವೇರಿ: ಕರ್ನಾಟಕ ವಿಶ್ವವಿದ್ಯಾಲಯವು ಪದವಿ ತರಗತಿಗಳ ಪರೀಕ್ಷೆ ನಡೆಸದೆ ಮುಂದಿನ ಸೆಮಿಸ್ಟರ್​ಗಳ ಆನ್​ಲೈನ್ ತರಗತಿ ಆರಂಭಿಸಿ ವಿದ್ಯಾರ್ಥಿಗಳನ್ನು ಗೊಂದಲಕ್ಕೀಡು ಮಾಡುತ್ತಿದೆ. ಸೆಮಿಸ್ಟರ್ ಬದಲು ವಾರ್ಷಿಕ ಪರೀಕ್ಷೆ ಘೊಷಿಸಬೇಕು ಎಂದು ಒತ್ತಾಯಿಸಿ ಎಸ್​ಎಫ್​ಐನಿಂದ ಪ್ರತಿಭಟನೆ ನಡೆಸಲಾಯಿತು.

ಕೋವಿಡ್ ಹಿನ್ನೆಲೆಯಲ್ಲಿ ಇಲ್ಲಿನ ಶಿವಾಜಿನಗರದ 2ನೇ ಕ್ರಾಸ್​ನಲ್ಲಿರುವ ಎಸ್​ಎಫ್​ಐ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದ ಪದಾಧಿಕಾರಿಗಳು, ಕವಿವಿ ಪದವಿಯ 1, 3, 5ನೇ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸದೆ 2, 4, 6ನೇ ಸೆಮಿಸ್ಟರ್​ಗಳ ಆನ್​ಲೈನ್ ತರಗತಿಗಳನ್ನು ನಡೆಸಲು ತೀರ್ವನಿಸಿ ಸುತ್ತೋಲೆ ಹೊರಡಿಸಿದೆ. ವಿದ್ಯಾರ್ಥಿಗಳು, ಅಧ್ಯಾಪಕರ ಸಂಘದೊಂದಿಗೆ ಸಮಾಲೋಚನೆ ನಡೆಸದೆ ಕವಿವಿಯು ವಿದ್ಯಾರ್ಥಿಗಳನ್ನು ಗೊಂದಲಕ್ಕೀಡು ಮಾಡಿದೆ ಎಂದು ಆರೋಪಿಸಿದರು.

ಸಾರಿಗೆ ಸಂಸ್ಥೆ ನೌಕರರ ಮುಷ್ಕರ, ಜನತಾ ಕರ್ಫ್ಯೂನಿಂದಾಗಿ ಸ್ನಾತಕ ಪದವಿ ತರಗತಿಗಳ ಸೆಮಿಸ್ಟರ್ ಪರೀಕ್ಷೆಗಳು ನಡೆದಿಲ್ಲ. ಕೂಡಲೆ ಕವಿವಿಯು ಸುತ್ತೋಲೆ ಹಿಂಪಡೆದು ಸೆಮಿಸ್ಟರ್ ಪದ್ಧತಿ ರದ್ದುಗೊಳಿಸಿ ವಾರ್ಷಿಕ ಪರೀಕ್ಷೆ ಮಾಡಬೇಕು. ಹಳ್ಳಿ ವಿದ್ಯಾರ್ಥಿಗಳಿಗೆ ಆನ್​ಲೈನ್ ತರಗತಿಗೆ ಹಾಜರಾಗಲು ಮೊಬೈಲ್​ಫೋನ್ ನೆಟ್​ವರ್ಕ್ ಸಮಸ್ಯೆಯಿದೆ. ಹೀಗಾಗಿ, ಅನೇಕ ವಿದ್ಯಾರ್ಥಿಗಳು ಪಾಠದಿಂದ ವಂಚಿತರಾಗಬೇಕಾಗುತ್ತದೆ ಎಂದು ದೂರಿದ್ದಾರೆ. ಸೆಮಿಸ್ಟರ್​ಗಳ ಪಠ್ಯಕ್ರಮ ಕಡಿಮೆಗೊಳಿಸಿ ಒಂದೇ ಪರೀಕ್ಷೆ ನಡೆಸಲು ಚಿಂತಿಸಬೇಕು. ಕರೊನಾ ಕಾರಣಕ್ಕೆ ಎಲ್ಲ ವಿಶ್ವವಿದ್ಯಾಲಯಗಳು ಸಭೆ ನಡೆಸಿ ವಾರ್ಷಿಕ ಪರೀಕ್ಷೆ ಮಾಡಬೇಕು. ವಾರ್ಷಿಕ ಪರೀಕ್ಷೆ ನಡೆಸುವ ಮೂಲಕ ವಿದ್ಯಾರ್ಥಿಗಳ ಪರೀಕ್ಷೆ ಶುಲ್ಕದ ಹೊರೆ ಇಳಿಸಬೇಕು ಎಂಬಿತ್ಯಾದಿ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರತಿಭಟನೆಯಲ್ಲಿ ಎಸ್​ಎಫ್​ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಭೋವಿ, ಸಿದ್ದಪ್ಪ ಅಂಗಡಿ, ಮಹೇಶ ನರೇಗಲ್ಲ, ಕೆ.ಬಿ. ಕೃಷ್ಣ, ಪ್ರತೀಕ ಪಿ., ಅರುಣ ಕಡಕೋಳ, ಕಿರಣ ಎಂ., ಪ್ರಸನ್ನ ಬಿ.ಕೆ. ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net