ಪಶು ಆಸ್ಪತ್ರೆಗೆ ಆಗ್ರಹಿಸಿ ಪ್ರತಿಭಟನೆ

29kkr2(7-24
ಕಿಕ್ಕೇರಿ ಪಶು ಆಸ್ಪತ್ರೆಯಲ್ಲಿ ವೈದ್ಯರ ನೇಮಕಕ್ಕೆ ಒತ್ತಾಯಿಸಿ ರೈತರು ಸೋಮವಾರ ಪ್ರತಿಭಟನೆ ನಡೆಸಿದರು. ಬೋರಾಪುರ ಮಂಜುನಾಥ್, ಚನ್ನ ನಿಂಗೇಗೌಡ, ಕೆ.ಎನ್. ಪುಟ್ಟೇಗೌಡ, ಕಾಯಿ ಸುರೇಶ್, ಕೆ.ಕೆ. ಚಂದ್ರಶೇಖರ್, ರಘು, ಕೆ.ಜಿ. ತಮ್ಮಣ್ಣ ಮತ್ತಿತರರಿದ್ದರು.
Published on

ಕಿಕ್ಕೇರಿ : ತಾಲೂಕಿನಲ್ಲಿಯೇ ದೊಡ್ಡ ಹೋಬಳಿ ಕೇಂದ್ರವಾದ ಕಿಕ್ಕೇರಿಯಲ್ಲಿ ಪಶು ಆಸ್ಪತ್ರೆಗೆ ವೈದ್ಯರಿಲ್ಲದೆ ಜಾನುವಾರುಗಳ ಮೂಕವೇದನೆ ಕೇಳುವವರು ಇಲ್ಲವಾಗಿದೆ ಎಂದು ರೈತರು ಕಿಡಿಕಾರಿದರು.
ಬೋರಾಪುರದ ರೈತ ವೆಂಕಟೇಶ್ ಅವರ ಎಚ್‌ಎಫ್ ಹಸುವಿನ ಕರುವಿಗೆ ಸೂಕ್ತ ಚಿಕಿತ್ಸೆ ಸಿಗದೆ ಸೋಮವಾರ ಅಸುನೀಗಿದ ಕಾರಣ ಪಶು ಆಸ್ಪತ್ರೆ ಮುಂದೆ ರೈತರು, ಹೋಬಳಿ ಮುಖಂಡರು ಜಮಾಯಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಐದಾರು ವರ್ಷಗಳಿಂದ ಇಲ್ಲಿನ ಆಸ್ಪತ್ರೆಗೆ ವೈದ್ಯರೇ ಇಲ್ಲವಾಗಿದೆ. ಸಾಸಲು, ಆನೆಗೊಳ, ಮಾದಾಪುರ ಗ್ರಾಮಗಳಲ್ಲಿ ಪಶು ಆಸ್ಪತ್ರೆ ಇದ್ದು, ಎಲ್ಲೂ ವೈದ್ಯರೇ ಇಲ್ಲದ ಹಿನ್ನೆಲೆಯಲ್ಲಿ ಹೋಬಳಿಯ ಜನತೆ ಜಾನುವಾರುಗಳನ್ನು ಸಾಕುವುದು ಕಷ್ಟವಾಗಿದೆ. ಮಾದಾಪುರದಲ್ಲಿ ವೈದ್ಯರು ಇದ್ದು ಈ ವೈದ್ಯರೇ ಸುತ್ತಮುತ್ತಲ ಆಸ್ಪತ್ರೆಗಳಲ್ಲಿ ಉಸ್ತುವಾರಿ ವಹಿಸಬೇಕಿದ್ದು ಇದರಿಂದ ಪ್ರಯೋಜನವಾಗಲಾರದು. ಹೋಬಳಿ ಕೇಂದ್ರದಲ್ಲಿಯೇ ಪಶು ವೈದ್ಯರಿಲ್ಲದೆ ಜಾನುವಾರಗಳ ಮೂಕವೇದನೆ ಕೇಳುವವರು ಯಾರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತ ಮುಖಂಡ ಬೋರಾಪುರ ಮಂಜುನಾಥ್ ಮಾತನಾಡಿ, ಗುತ್ತಿಗೆ ಆಧಾರದಲ್ಲಿ ಹಲವು ಪಶು ಅನುವುಗಾರರು ಇದ್ದು, ಇವರು ಆಸ್ಪತ್ರೆ ಲೆಕ್ಕಕ್ಕೆ ಇದೆ ಎಂದು ಹೇಳಬಹುದು ಅಷ್ಟೆ. ನುರಿತ ವೈದ್ಯರಿಲ್ಲದೆ ಇವರ ಬಳಿ ರೈತರು ತಮ್ಮ ಗೋಳು ತೋಡಿಕೊಳ್ಳಲು ಕಷ್ಟವಾಗಿದೆ. ಸಣ್ಣಪುಟ್ಟ ಸಮಸ್ಯೆಗಳಾದರೆ ನೋಡಬಹುದು ಹೋಬಳಿ ಕೇಂದ್ರದಲ್ಲಿ 60ಕ್ಕೂ ಹೆಚ್ಚು ಹಳ್ಳಿಗಳಿವೆ. ಪ್ರತಿ ಹಳ್ಳಿಗಳಲ್ಲಿ ಹಾಲಿನ ಡೇರಿ ಇದೆ. ರೈತರು ಸಾಲ ಮಾಡಿಕೊಂಡು ಸಾವಿರಾರು ರೂ. ತೆತ್ತು ಹಸುಗಳನ್ನು ಸಾಕಿಕೊಂಡಿದ್ದಾರೆ. ಹೈನುಗಾರಿಕೆ ನಂಬಿರುವ ರೈತರ ರಾಸುಗಳ ಅಕಾಲಿಕ ಮರಣವಾದರೆ ಬದುಕು ಬೀದಿಪಾಲಾಗಲಿದೆ. ಶಾಸಕರು, ಸಂಬಂಧಪಟ್ಟ ಅಧಿಕಾರಿಗಳು ತ್ವರಿತವಾಗಿ ವೈದ್ಯರನ್ನು ನೇಮಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು. ಮನ್ಮುಲ್ ಮಾಜಿ ಅಧ್ಯಕ್ಷ ಚನ್ನನಿಂಗೇಗೌಡ, ಗ್ರಾಪಂ. ಮಾಜಿ ಅಧ್ಯಕ್ಷ ಕಾಯಿ ಸುರೇಶ್, ಮುಖಂಡರಾದ ಕೆ.ಕೆ. ಚಂದ್ರಶೇಖರ್, ರಘು, ನಿಂಗರಾಜು, ಕೆ.ಜಿ. ತಮ್ಮಣ್ಣ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net