ಅಮಿತ್ ಷಾ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ

Published on

ಮೈಸೂರು: ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವುದರಿಂದ ಕೇಂದ್ರ ಗೃಹ ಸಚಿವ ಅಮಿತ್ ಷಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳಿಂದ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು.

ಅಶೋಕಪುರಂ ಆದಿ ಕರ್ನಾಟಕ ಮಹಾಸಂಸ್ಥೆ, ಯುವ ಸಂಘಟನೆಗಳ ಒಕ್ಕೂಟ, ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಸಿದ್ದಾರ್ಥ ಬಡಾವಣೆಯಲ್ಲಿರುವ ನೂತನ ಜಿಲ್ಲಾಧಿಕಾರಿ ಕಚೇರಿ ಮುಂದೆ ಜಮಾಯಿಸಿದ ಕಾರ್ಯಕರ್ತರು, ಪ್ರಧಾನಿ ಮೋದಿ, ಗೃಹಸಚಿವ ಅಮಿತ್ ಷಾ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ವಿಶ್ವಜ್ಞಾನಿ ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಇಡೀ ಜಗತ್ತು ಕೊಂಡಾಡುತ್ತಿದ್ದರೂ ಅಮಿತ್ ಷಾ ಅಪಮಾನಿಸಿರುವುದು ಸರಿಯಲ್ಲ. ದೇಶದಲ್ಲಿ ಕೋಮುವಾದದ ರಾಜಕಾರಣ ಮಾಡುತ್ತಿರುವ ಅಮಿತ್ ಷಾ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿ ದೇಶದಿಂದಲೇ ಗಡಿಪಾರು ಮಾಡಬೇಕು. ಅಮಿತ್ ಷಾ ಅವರಿಗೆ ಅಂಬೇಡ್ಕರ್ ಅವರ ಮೇಲೆ ಇರುವ ಅಸೂಯೆ ಹೊರ ಬಂದಿದೆ. ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ ಅಧಿಕಾರ ನಡೆಸುತ್ತಿರುವ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಆಗ್ರಹಿಸಿದರು.

ಪ್ರಜಾಪ್ರಭುತ್ವದ ಸಾರ್ವಭೌಮ ಸಂಸತ್‌ನಲ್ಲಿಯೇ ನಮ್ಮ ಬದುಕು, ದಾರಿದೀಪವಾಗಿರುವ ಅಂಬೇಡ್ಕರ್ ಅವರ ಸಾಧನೆಗಳನ್ನು ಹೇಳುವ ಬದಲಿಗೆ ಲೇವಡಿ ಮಾಡಿದ್ದಾರೆ. ದೇವರನ್ನು ಸ್ಮರಣೆ ಮಾಡುವುದಕ್ಕಿಂತ ನಾವು ಅಂಬೇಡ್ಕರ್ ಸ್ಮರಣೆ ಮಾಡಿಯೇ ಜೀವನ ಮಾಡುತ್ತಿದ್ದೇವೆ. ಆದರೆ ಅಂಬೇಡ್ಕರ್ ಸ್ಮರಣೆ ಮಾಡುವುದಕ್ಕಿಂತ ದೇವರ ಸ್ಮರಣೆ ಮಾಡಿ ಎಂದು ಹೇಳಿರುವುದು ದಲಿತರ ಮನಸ್ಸಿಗೆ ನೋವುಂಟು ಮಾಡಿರುವ ಅಮಿತ್ ಷಾ ರಾಜಕೀಯದಲ್ಲಿ ಮುಂದುವರಿಯಬಾರದು. ತಕ್ಷಣವೇ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.

ಸಂವಿಧಾನದ ಬೇರನ್ನು ಅಲುಗಾಡಿಸಲು ಒಂದೊಂದು ಕಂಬವನ್ನು ಕಿತ್ತು ಹಾಕುತ್ತಿರುವ ಬಿಜೆಪಿ ನಾಯಕರ ಹುನ್ನಾರ ಅರ್ಥ ಮಾಡಿಕೊಳ್ಳಬೇಕಾಗಿದೆ. ಹಾಗಾಗಿ ನಮಗೆ ಬದುಕು ತಂದುಕೊಟ್ಟಿರುವ ಅಂಬೇಡ್ಕರ್ ಅವರ ಗೌರವ ಎತ್ತಿ ಹಿಡಿಯಲು ದಲಿತರು, ಹಿಂದುಳಿದ ವರ್ಗಗಳು ಒಂದಾಗಬೇಕಿದೆ ಎಂದರು.

ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಅವರ ಮೂಲಕ ರಾಷ್ಟ್ರಪತಿಗೆ ಮನವಿ ಪತ್ರ ಸಲ್ಲಿಸಲಾಯಿತು. ಮಾಜಿ ಮೇಯರ್ ಪುರುಷೋತ್ತಮ್, ಮುಖಂಡ ಎಚ್.ವಾಸು, ಅಶೋಕಪುರಂ ರಾಜು, ವಿ.ರಾಮಸ್ವಾಮಿ, ರವಿ, ದ್ಯಾವಪ್ಪನಾಯಕ, ಸಿದ್ದರಾಜು, ಆದಿ ಕರ್ನಾಟಕ ಮಹಾಸಂಸ್ಥೆ ಅಧ್ಯಕ್ಷ ಪಿ.ಸಿದ್ದರಾಜು, ಉಪಾಧ್ಯಕ್ಷ ಶಿವಸ್ವಾಮಿ, ಪ್ರಧಾನ ಕಾರ್ಯದರ್ಶಿ ಡಿ.ರಾಜು, ಸಹ ಕಾರ್ಯದರ್ಶಿ ಜೆ.ಜಯಕುಮಾರ್, ಖಜಾಂಚಿ ಸಿ.ಕೃಷ್ಣಮೂರ್ತಿ, ಸಲಹೆಗಾರ ಮಹಾಲಿಂಗಯ್ಯ, ನಗರಪಾಲಿಕೆ ಮಾಜಿ ಸದಸ್ಯೆ ಪಲ್ಲವಿ ಬೇಗಂ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net