

ಮೈಸೂರು: ಸಮರ್ಪಕ ಕುಡಿಯುವ ನೀರು ಪೂರೈಕೆ ಮಾಡುವಂತೆ ಒತ್ತಾಯಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಗರದ ಹಾರ್ಡಿಂಜ್ ವೃತ್ತದಲ್ಲಿ ಖಾಲಿ ಕೊಡ ಹಿಡಿದು ಪ್ರತಿಭಟನೆ ನಡೆಸಿದರು.
ರಾಜ್ಯ ಸರ್ಕಾರ ಸಮರ್ಪಕವಾಗಿ ನೀರು ಪೂರೈಕೆ ಮಾಡುವಲ್ಲಿ ವಿಫಲವಾಗಿದೆ. ತಮಿಳುನಾಡನ್ನು ಓಲೈಕೆ ಮಾಡಲು ನಮ್ಮ ಜಲಾಶಯಗಳಿಂದ ನೀರು ಹರಿಸಿ ಜಲಾಶಯಗಳನ್ನು ಬರಿದು ಮಾಡಿದೆ. ತಮಿಳುನಾಡಿನ ಜಲಾಶಯಗಳಲ್ಲಿ ನೀರಿದ್ದರೆ, ನಮ್ಮ ಜಲಾಶಯಗಳಲ್ಲಿ ಕುಡಿಯಲೂ ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಕುಡಿಯುವ ನೀರಿನ ಸಮಸ್ಯೆ ಎದುರಾಗಲು ರಾಜ್ಯ ಸರ್ಕಾರವೇ ನೇರ ಹೊಣೆ ಎಂದು ಕಿಡಿ ಕಾರಿದರು.
ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ತಮಿಳುನಾಡಿನ ಓಲೈಕೆಯಲ್ಲಿ ನಿರತವಾಗಿವೆ. ಈ ಎರಡೂ ಪಕ್ಷಗಳಿಗೆ ಕನ್ನಡಿಗರ ಹಿತಕ್ಕಿಂತ ತಮಿಳುನಾಡಿನ ಹಿತವೇ ಮುಖ್ಯವಾಗಿದೆ. ಕೂಡಲೇ ರಾಜ್ಯ ಸರ್ಕಾರ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ ಸಾರ್ವಜನಿಕರಿಗೆ ಸಮರ್ಪಕವಾಗಿ ನೀರು ಪೂರೈಕೆ ಮಾಡಬೇಕೆಂದು ಒತ್ತಾಯಿಸಿದರು.