

ನರಗುಂದ: ಬಸ್ ನಿಲ್ದಾಣದಿಂದ ಹಳ್ಳಿಗಳಿಗೆ ಸಮರ್ಪಕವಾಗಿ ಬಸ್ಗಳನ್ನು ಬಿಡುವಂತೆ ಆಗ್ರಹಿಸಿ ತಾಲೂಕಿನ ವಿವಿಧ ಗ್ರಾಮಗಳ ಜನರು ಹುಬ್ಬಳ್ಳಿ-ವಿಜಯಪುರ ಮಾರ್ಗವಾಗಿ ಸಂಚರಿಸುವ ಬಸ್ಗಳನ್ನು ತಡೆದು ಪಟ್ಟಣದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ಅಳಗವಾಡಿ ಗ್ರಾಮದ ಪ್ರಯಾಣಿಕ ಶಂಕರಗೌಡ ತೆಗ್ಗಿನಕೇರಿ ಮಾತನಾಡಿ, ಈ ಹಿಂದೆ ನರಗುಂದದಿಂದ ಅಳಗವಾಡಿ ಮಾರ್ಗವಾಗಿ ಶಿರಕೋಳ ಗ್ರಾಮಕ್ಕೆ ನಿತ್ಯ 3, ಧಾರವಾಡದಿಂದ 1, ಹುಬ್ಬಳ್ಳಿ ಘಟಕದಿಂದ 1 ಬಸ್ ಸಂಚಾರವಿತ್ತು. ಲಾಕ್ಡೌನ್ ವೇಳೆ ಸಂಚಾರ ಸ್ಥಗಿತಗೊಳಿಸಿದ್ದಾರೆ. ಈ ಮಾರ್ಗವಾಗಿ ಯಾವುದೇ ಬಸ್ ಬಿಡುತ್ತಿಲ್ಲ. ಇದರಿಂದ ಹುಣಸೀಕಟ್ಟಿ, ಜಗಾಪುರ, ಅಳಗವಾಡಿ, ಹೆಬ್ಬಾಳ, ಜಾವೂರ, ಹನಸಿ, ಶಿರಕೋಳ ಗ್ರಾಮಸ್ಥರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಈ ಬಗ್ಗೆ ನರಗುಂದ ಬಸ್ ಡಿಪೋ ಮ್ಯಾನೇಜರ್ಗೆ ಬಸ್ಗಳನ್ನು ಬಿಡುವಂತೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಸಮಸ್ಯೆ ಬಗೆಹರಿಸುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದರು. ಸ್ಥಳಕ್ಕಾಗಮಿಸಿದ ವಾಕರಸಾಸಂ ನರಗುಂದ ಘಟಕ ವ್ಯವಸ್ಥಾಪಕ ಎ.ಎಸ್. ಹಳ್ಳದ ಮಾತನಾಡಿ, ‘ಲಾಕ್ಡೌನ್ ಮುಂಚೆ ನರಗುಂದ ಘಟಕದಿಂದ ನಿತ್ಯ 70 ಶೆಡ್ಯೂಲ್ಗಳು ಕಾರ್ಯ ನಿರ್ವಹಿಸುತ್ತಿದ್ದವು. ಈಗ 60 ಶೆಡ್ಯೂಲ್ಗಳು ಮಾತ್ರ ಕರ್ತವ್ಯ ನಿರ್ವಹಿಸುವಂತಾಗಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಒಂದು ಗ್ರಾಮಕ್ಕೆ ಒಂದು ಬಸ್ ಮಾತ್ರ ಸಂಚರಿಸುತ್ತಿದೆ. ಆರ್ಥಿಕ ಸಮಸ್ಯೆ ಸುಧಾರಿಸಿದ ಮೇಲೆ ಎಲ್ಲ ವಾಹನಗಳು ಸುಗಮವಾಗಿ ಸಂಚರಿಸಲಿವೆ. ಹುಬ್ಬಳ್ಳಿ ತಾಲೂಕಿನಾದ್ಯಂತ ಶುಕ್ರವಾರ ಭಾರಿ ಮಳೆಯಾಗಿರುವ ಕಾರಣ ಆ ಡಿಪೋದ ಒಂದೂ ಬಸ್ ಬಂದಿಲ್ಲ. ಆದರೂ ನಮ್ಮ ಡಿಪೋದ ಒಂದು ಬಸ್ ಅನ್ನು ಓಡಿಸಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲಾಗುವುದು’ ಎಂದು ಭರವಸೆ ನೀಡಿದ ನಂತರ ಪ್ರಯಾಣಿಕರು ಪ್ರತಿಭಟನೆ ಕೈಬಿಟ್ಟರು.
ಶಾಂತಪ್ಪ ಕಟ್ಟಿ, ಯಲ್ಲಪ್ಪ ಕುಡೇನ್ನವರ, ಫಕೀರಪ್ಪ ಸವದತ್ತಿ, ಗೂಳಪ್ಪ ಚಿಕ್ಕನರಗುಂದ, ಪರಸಪ್ಪ ಬಡಿಗೇರ, ಯಲ್ಲವ್ವ ಕ್ಯಾಡದ, ಸುರೇಶ ಸವದಿ, ಹಸನಸಾಬ್ ಮುಲ್ಲಾ, ಯಲ್ಲಪ್ಪ ತಳವಾರ, ಭೀಮಪ್ಪ ಚುರಮುರಿ, ದಾದಾಪೀರ ಲೋಧಿ, ಶಕುಂತಲಾ ದೊಡಮನಿ ಇತರರಿದ್ದರು.