ಕಾಡಾನೆ ಹಾವಳಿ ತಡೆಗೆ ಒತ್ತಾಯಿಸಿ ಪ್ರತಿಭಟನೆ

ಕಾಡಾನೆ ಹಾವಳಿ ತಡೆಗಟ್ಟುವಂತೆ ಒತ್ತಾಯಿಸಿ ಎಸಿಎಫ್ ಗೋಪಾಲ್‌ಗೆ ಬಿ.ಶೆಟ್ಟಿಗೇರಿ, ಬೇಗೂರು, ಈಚೂರು, ಕುಂದ ಹಾಗೂ ಹಳ್ಳಿಗಟ್ಟು ಗ್ರಾಮಸ್ಥರು ಮನವಿ ಸಲ್ಲಿಸಿದರು.
ಕಾಡಾನೆ ಹಾವಳಿ ತಡೆಗಟ್ಟುವಂತೆ ಒತ್ತಾಯಿಸಿ ಎಸಿಎಫ್ ಗೋಪಾಲ್‌ಗೆ ಬಿ.ಶೆಟ್ಟಿಗೇರಿ, ಬೇಗೂರು, ಈಚೂರು, ಕುಂದ ಹಾಗೂ ಹಳ್ಳಿಗಟ್ಟು ಗ್ರಾಮಸ್ಥರು ಮನವಿ ಸಲ್ಲಿಸಿದರು.
Published on

ಗೋಣಿಕೊಪ್ಪಲು: ಕಾಡಾನೆ ಹಾವಳಿ ತಡೆಗಟ್ಟುವಂತೆ ಒತ್ತಾಯಿಸಿ ಪೊನ್ನಂಪೇಟೆ ತಾಲೂಕಿನ ಬಿ.ಶೆಟ್ಟಿಗೇರಿ, ಬೇಗೂರು, ಈಚೂರು, ಕುಂದ ಹಾಗೂ ಹಳ್ಳಿಗಟ್ಟು ವ್ಯಾಪ್ತಿಗೆ ಒಳಪಡುವ ಕೃಷಿಕರು ಮತ್ತು ಬೆಳೆಗಾರರು ಪೊನ್ನಂಪೇಟೆ ವಲಯ ಅರಣ್ಯ ಅಧಿಕಾರಿಗಳ ಕಚೇರಿ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಸಿದರು.

ಬರಪೊಳೆ ಪ್ರದೇಶದಿಂದ ಬರುವ ಕಾಡಾನೆಗಳಿಂದ ಸಂಘರ್ಷ ಮಿತಿ ಮೀರಿದೆ. ಇದರೊಂದಿಗೆ ಹುಲಿ ಹಾವಳಿಯಿಂದ ಜಾನುವಾರುಗಳು ಬಲಿಯಾಗುತ್ತಿವೆ. ಹೀಗಾಗಿ ಪರಿಹಾರಕ್ಕೆ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಸ್ಥಳೀಯರಾದ ಮಾಚಿಮಾಡ ರವೀಂದ್ರ ಮಾತನಾಡಿ, ಅರಣ್ಯದಿಂದ ಬರುವ ಆನೆಗಳನ್ನು ತಡೆಗಟ್ಟುವ ಕೆಲಸ ಮಾಡಬೇಕು. ಬ್ಯಾರಿಕೇಡ್ ನಿರ್ಮಿಸಲು ಸರ್ಕಾರದಿಂದ ಭೂಮಿಪೂಜೆಯಾಗಿ 6 ತಿಂಗಳು ಕಳೆದಿದ್ದು, ತಕ್ಷಣವೇ ಬ್ಯಾರಿಕೇಡ್ ನಿರ್ಮಿಸುವುದರ ಮೂಲಕ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಕಾಡಾನೆಗಳು ನಾಡಿಗೆ ಬರುವುದನ್ನು ತಪ್ಪಿಸುವಲ್ಲಿ ಸರಕಾರ ವಿಫಲವಾಗಿದೆ. ಅರಣ್ಯ ಅಧಿಕಾರಿಗಳು ವನ್ಯಜೀವಿಗಳು ನಾಡಿಗೆ ಬರದಂತೆ ತಡೆಯಲು ಕೈಗೊಂಡಿರುವ ಕ್ರಮಗಳು ಬಗ್ಗೆ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು.

ಪೊನ್ನಂಪೇಟೆ, ಬಿ.ಶೆಟ್ಟಿಗೇರಿ, ಬೇಗೂರು, ಚೀನಿವಾಡ ಹಾಗೂ ಕುಂದಾ ಭಾಗದಲ್ಲಿ ವನ್ಯಜೀವಿಗಳ ಹಾವಳಿಗೆ ಕಡಿವಾಣ ಹಾಕಬೇಕು. ವನ್ಯಪ್ರಾಣಿ ಹಾವಳಿ ಮುಂದುವರಿದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ ಅವರು, ಮುಂದಿನ 3 ದಿನಗಳಲ್ಲಿ ಕಾಡಾನೆಗಳನ್ನು ಕಾಡಿಗಟ್ಟಲು ಕ್ರಮ ಕೈಗೊಳ್ಳಬೇಕು. ಜತೆಗೆ ಹುಲಿ ದಾಳಿಯಿಂದ ಪ್ರಾಣಿಗಳು ಮೃತಪಟ್ಟರೆ ಅರಣ್ಯ ಇಲಾಖೆಯಿಂದ ಪರಿಹಾರ ಹಣದ ಬದಲು ಜಾನುವಾರುಗಳನ್ನೇ ನೀಡುವ ವ್ಯವಸ್ಥೆ ಆಗಬೇಕು ಎಂದು ಒತ್ತಾಯಿಸಿದರು.

ಇದೇ ಸಂದರ್ಭ ಎಸಿಎಫ್ ಗೋಪಾಲ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿ ಎಸಿಎಫ್ ಗೋಪಾಲ್ ಮಾತನಾಡಿ, ಬೇಗೂರು, ಚೀನಿವಾಡ ಗ್ರಾಮ ಪ್ರದೇಶಗಳು ಮಡಿಕೇರಿ ವೈಲ್ಡ್ ಲೈಫ್‌ಗೆ ಒಳಪಡುತ್ತವೆ. ಈ ಪ್ರದೇಶಗಳಿಗೆ ಕಾಡಾನೆಗಳು ಬಂದಿರುವ ಮಾಹಿತಿ ದೊರೆತ ತಕ್ಷಣ ಕಾಡಿಗಟ್ಟಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಇನ್ನು ಬ್ಯಾರಿಕೇಡ್ ಅಳವಡಿಸುವ ಕಾಮಗಾರಿ ವೈಲ್ಡ್ ಲೈಫ್ ವಿಭಾಗದಿಂದ ನಡೆಯಬೇಕಿದ್ದು, ಮನವಿ ಪತ್ರವನ್ನು ವೈಲ್ಡ್ ಲೈಪ್ ಅಧಿಕಾರಿಗಳಿಗೆ ತಲುಪಿಸಿ ಸೂಕ್ತ ಕ್ರಮಕ್ಕೆ ಶಿಫಾರಸು ಮಾಡುವುದಾಗಿ ಹೇಳಿದರು.

ಸರ್ಕಾರದಿಂದ ಬಿಡುಗಡೆಯಾಗಿರುವ 21 ಕೋಟಿ ರೂ.ಗಳ ಅನುದಾನದಲ್ಲಿ ಮಾಲ್ದಾರೆ ವ್ಯಾಪ್ತಿಯ ಕಾವೇರಿ ನದಿ ಭಾಗದಿಂದ ಘಟ್ಟದಳ್ಳದವರೆಗೆ 8 ಕಿಲೋ ಮೀಟರ್ ರೈಲ್ವೆ ಬ್ಯಾರಿಕೇಡ್ ಹಾಗೂ ನಾಗರಹೊಳೆ ಹುಲಿ ಸಂರಕ್ಷತಾ ಪ್ರದೇಶವಾದ ತಿತಿಮತಿ ಭಾಗದಲ್ಲಿ 7 ಕಿಲೋ ಮೀಟರ್ ರೈಲ್ವೆ ಬ್ಯಾರಿಕೇಡ್ ಅಳವಡಿಸಲು ಟೆಂಡರ್ ಕಾರ್ಯ ಪ್ರಗತಿಯಲ್ಲಿದೆ. ಬಿ.ಶೆಟ್ಟಿಗೇರಿ ಭಾಗದಲ್ಲಿ ವನ್ಯಪ್ರಾಣಿ ಹಾವಳಿ ತಡೆಗಟ್ಟಲು ಸೋಲಾರ್ ತಂತಿ ಅಳವಡಿಸುವ ಚಿಂತನೆ ಇದೆ ಎಂದು ಮಾಹಿತಿ ನೀಡಿದರು.

ಪ್ರತಿಭಟನೆಯಲ್ಲಿ ಚೆಪ್ಪುಡಿರ ರಾಕೇಶ್ ದೇವಯ್ಯ, ಚೋಡುಮಾಡ ಶಾಮ್, ವಿಕ್ರಂ, ಸುಬ್ರಮಣಿ, ಮತ್ರಂಡ ಪ್ರವೀಣ್, ಕಾರ್ಯಪ್ಪ, ಸ್ಕಂದ, ರಶೀಕ, ಮಿತ್ರ, ವಿಠಲ್, ಅಯ್ಯಪ್ಪ, ನಾಮೇರ ವಾಸು, ಅಚ್ಚಯ್ಯ, ಮೊಣ್ಣಪ್ಪ, ತೀತಿಮಾಡ ಪವಿ, ರವಿ, ಕೇಚಟ್ಟಿರ ಅರುಣಾ, ಸಪ್ತ, ಅಕ್ಷಯ, ಕಾರ್ಯಪ್ಪ, ತಮ್ಮಯ್ಯ ಹಾಗೂ ಚೀನಿವಾಡ, ಬಿ.ಶೆಟ್ಟಿಗೇರಿ, ಕುಂದ ಹಳ್ಳಿಗಟ್ಟು, ಈಚೂರು, ಬೇಗೂರು ಗ್ರಾಮಸ್ಥರು ಭಾಗಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net