ಪ್ರಜ್ವಲ್ ಹಾಗೂ ರೇವಣ್ಣ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ

6 ckm 1
ಚಿಕ್ಕಮಗಳೂರಿನ ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ದಲಿತ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಸಂಸದ ಪ್ರಜ್ವಲ್ ಹಾಗೂ ಮಾಜಿ ಸಚಿವ ರೇವಣ್ಣ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
Published on

ಚಿಕ್ಕಮಗಳೂರು: ಮಹಿಳೆಯರ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ನಡೆಸಿರುವ ಸಂಸದ ಪ್ರಜ್ವಲ್ ಹಾಗೂ ಶಾಸಕ ಎಚ್ ಡಿ ರೇವಣ್ಣ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ದಲಿತ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ನಗರದ ಆಜಾದ್ ಪಾರ್ಕ್ ವೃತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುವ ಜೊತೆಗೆ ಅದನ್ನು ವಿಡಿಯೋ ಮಾಡಿಕೊಂಡು ವಿಕೃತಿ ಮೆರೆದಿದ್ದಾರೆ. ಜೊತೆಗೆ ಮಹಿಳೆಯರನ್ನು ಅಪಹರಿಸಿ ಬಚ್ಚಿಟ್ಟ ಪ್ರಕರಣವು ಅವರ ಮೇಲಿದೆ ಹೀಗಾಗಿ ಅಪ್ಪ ಮಗನ ವಿರುದ್ಧ ಕೂಡಲೇ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಮಾಜದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಪ್ರಜ್ವಲ್ ಹಾಗೂ ರೇವಣ್ಣ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಸಹಾಯ ಕೇಳಿಕೊಂಡು ಬಂದ ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ್ದಾರೆ. ಮಹಿಳೆಯರ ಅಸಹಾಯಕತೆಯೇ ಅಪ್ಪ ಮಕ್ಕಳಿಗೆ ಬಂಡವಾಳವಾಗಿದೆ. ಪ್ರಜ್ವಲ್ ಗೆ ಸಂಬಂಧಿಸಿದ 2900ಕ್ಕೂ ಹೆಚ್ಚು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ ಹೀಗಾಗಿ ಪ್ರಜ್ವಲ್ ವಿರುದ್ಧ ಕನಿಷ್ಠ 300 ಪ್ರಕರಣಗಳನ್ನಾದರೂ ದಾಖಲು ಮಾಡಬೇಕು. ಕೂಡಲೇ ಪ್ರಜ್ವಲ್ ಬಂಧನಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರಜ್ವಲ್ ಅವರನ್ನು ಸಂಸತ್ ಸ್ಥಾನದಿಂದ ಹಾಗೂ ರೇವಣ್ಣ ಅವರನ್ನು ಶಾಸಕ ಸ್ಥಾನದಿಂದ ಕೂಡಲೇ ವಜಾ ಗೊಳಿಸಬೇಕು. ಸಂತ್ರಸ್ತ ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡಬೇಕು ಹಾಗೂ ಆ ಮಹಿಳೆಯರಿಗೆ ಆರೋಪಿತರಿಂದಲೇ ಪರಿಹಾರ ಕೊಡಿಸಬೇಕು ಎಂದು ಒತ್ತಾಯಿಸಿದರು.
ಸಮವಸ್ತ್ರ ಧರಿಸಿ ಲೈಂಗಿಕ ಕೃತ್ಯದಲ್ಲಿ ಭಾಗಿಯಾಗಿರುವ ಅಧಿಕಾರಿ ಯಾರು ಎಂಬುದನ್ನು ಪತ್ತೆ ಹಚ್ಚಿ ಅವರನ್ನು ಸೇವೆಯಿಂದಲೇ ವಜಾ ಗೊಳಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ದಲಿತಪರ ಸಂಘಟನೆಗಳ ಮುಖಂಡರಾದ ಮರ್ಲೆ ಅಣ್ಣಯ್ಯ, ಹುಣಸೆಮಕ್ಕಿ ಲಕ್ಷ್ಮಣ್, ಹೊನ್ನೇಶ್, ಉಮೇಶ್, ಕೋಟೆ ಜಗದೀಶ್, ಕಾಂಗ್ರೆಸ್ ಮುಖಂಡ ಎಚ್.ಎಚ್. ದೇವರಾಜ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net