ತಾರತಮ್ಯ ನೀತಿ ಕೈಬಿಡಲು ಆಗ್ರಹಿಸಿ ಪ್ರತಿಭಟನೆ

2 vikram 2
Published on

ಧಾರವಾಡ: ಖಾಸಗಿ ಮತ್ತು ಸರ್ಕಾರಿ ಶಾಲೆಗಳ ನಡುವೆ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ. ಶಿಕ್ಷಣ ವ್ಯವಸ್ಥೆಯನ್ನು ಗೊಂದಲದ ಗೂಡು ಮಾಡಿರುವ ಸರ್ಕಾರದ ನೀತಿ ಖಂಡಿಸಿ ಹು-ಧಾ ಅನುದಾನ ರಹಿತ ಖಾಸಗಿ ಶಾಲಾ ಅಭಿವೃದ್ಧಿ ಸಂಸ್ಥೆ ವತಿಯಿಂದ ನಗರದ ಡೆಪ್ಯುಟಿ ಚನ್ನಬಸಪ್ಪ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.

ಶಿಕ್ಷಣ ಸಚಿವರು ದಿನಕ್ಕೊಂದು ಹೇಳಿಕೆ ನೀಡುವ ಮೂಲಕ ಪಾಲಕರು, ಮಕ್ಕಳಲ್ಲಿ ಗೊಂದಲ ಹಾಗೂ ತಪ್ಪು ಅಭಿಪ್ರಾಯ ಮೂಡುವಂತೆ ಮಾಡುತ್ತಿರುವುದನ್ನು ನಿಲ್ಲಿಸಬೇಕು. 8 ತಿಂಗಳಿಂದ ಅನುದಾನ ರಹಿತ ಖಾಸಗಿ ಶಾಲೆಗಳ ಶಿಕ್ಷಕರು, ಸಿಬ್ಬಂದಿಗೆ ವಿಶೇಷ ಪ್ಯಾಕೇಜ್ ನೀಡಿ ಜೂನ್​ವರೆಗೆ ಕನಿಷ್ಠ ವೇತನ ನೀಡಬೇಕು. ಪಾಲಕರಿಗೆ ಮನವರಿಕೆ ಆಗುವ ರೀತಿ ಹೇಳಿಕೆ ನೀಡಿ ಶಾಲಾ ಶುಲ್ಕ ಭರಿಸುವಂತೆ ಮಾಡಬೇಕು. ಸರ್ಕಾರಿ ಮತ್ತು ಅನುದಾನ ರಹಿತ ಶಾಲೆಗಳ ಮಕ್ಕಳನ್ನು ಒಂದೇ ದೃಷ್ಟಿಯಿಂದ ನೋಡಬೇಕು. ಶೈಕ್ಷಣಿಕ ಸಮಸ್ಯೆಗಳು ಬಂದಾಗ ಬೆಂಗಳೂರಿಗೆ ಮಾತ್ರ ಸೀಮಿತಗೊಳಿಸಿ ಅಭಿಪ್ರಾಯ ಸಂಗ್ರಹಿಸದೆ, ರಾಜ್ಯದ ಎಲ್ಲ ಸಂಸ್ಥೆಗಳಿಂದ ಸಂಗ್ರಹಿಸುವುದು ಸೇರಿ ಇತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.

ನಂತರ ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತ ಸಿದ್ಧಲಿಂಗಯ್ಯ ಹಿರೇಮಠ, ಜಿಲ್ಲಾಧಿಕಾರಿ ನಿತೇಶ ಪಾಟೀಲ ಮೂಲಕ ಸರ್ಕಾರಕ್ಕೆ ಮನವಿಪತ್ರ ರವಾನಿಸಿದರು. ಧಾರವಾಡ ಅನುದಾನ ರಹಿತ ಖಾಸಗಿ ಶಾಲಾ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ ಶಂಕರ ಹಲಗತ್ತಿ, ಕಾರ್ಯದರ್ಶಿ ಎಸ್.ವಿ. ಸಾಲಿಮಠ, ರಾಜೇಂದ್ರ ಮಾಳೋದೆ, ಲಕ್ಷ್ಮಣ ಉಪ್ಪಾರ, ರಾಘವೇಂದ್ರ ಸೊಂಡೂರ, ಮಹೇಶ ಪಾಟೀಲ, ಸಾಧನಾ ಎಸ್., ರಜನಿದಾಸ್, ರೋಜಲಿನ್ ಮುರಗೋಡ, ರೂಪ್ಸಾ ಅಧ್ಯಕ್ಷ ಲೋಕೇಶ ತಾಳಿಕೋಟಿ, ಶಶಿಧರ ದಿಂಡೂರ, ನಾಗೇಂದ್ರ ಕಟಕೋಳ, ವೃಕ್ಷ ಹಾಗೂ ಗ್ರಾಮೀಣ ಶಾಲೆಗಳ ಆಡಳಿತ ಮಂಡಳಿ ಸದಸ್ಯರು, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net