ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಖಂಡಿಸಿ ಪ್ರತಿಭಟನೆ

h25-BJP 1
Published on

ಹುಬ್ಬಳ್ಳಿ: ಧರ್ಮಸ್ಥಳ ಕ್ಷೇತ್ರ ಹಾಗೂ ಧರ್ಮಾಧಿಕಾರಿ ವಿರುದ್ಧ ಅಪಪ್ರಚಾರ ಮಾಡುತ್ತಿರುವುದನ್ನು ಖಂಡಿಸಿ ಹುಬ್ಬಳ್ಳಿ- ಧಾರವಾಡ ಮಹಾನಗರ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ನಗರದಲ್ಲಿ ಸೋಮವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.

ಇಲ್ಲಿಯ ಮೂರುಸಾವಿರ ಮಠದ ಆವರಣದಿಂದ ಪ್ರಾರಂಭವಾದ ಮೆರಣಿಗೆಯು ತುಳಜಾಭವಾನಿ ಸರ್ಕಲ್, ದಾಜೀಬಾನ ಪೇಟ, ದುರ್ಗಾದೇವಿ ದೇವಸ್ಥಾನ ರಸ್ತೆ ಮುಖಾಂತರ ಸಂಗೊಳ್ಳಿ ರಾಯಣ್ಣ ಸರ್ಕಲ್ಗೆ ಆಗಮಿಸಿತು. ಧರ್ಮಸ್ಥಳ ಕ್ಷೇತ್ರದ ಹೆಸರಿಗೆ ಕಳಂಕ ತರುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಕಾರ್ಯಕರ್ತರು ಆಗ್ರಹಿಸಿದರು. ಮುಸುಕುಧಾರಿ ವ್ಯಕ್ತಿಯ ಕೊರಳಿಗೆ ಹಗ್ಗ ಹಾಕಿ, ಎಳೆದೊಯ್ಯುವ ರೂಪಕ ಪ್ರದರ್ಶಿಸಿದರು. ನಂತರ ಮಿನಿವಿಧಾನ ಸೌಧಕ್ಕೆ ತೆರಳಿ ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ರವಾನಿಸಲಾಯಿತು.

ಮಿನಿ ವಿಧಾನಸೌಧದ ಮುಂದೆ ಮಾತನಾಡಿದ ಶಾಸಕ ಮಹೇಶ ಟೆಂಗಿನಕಾಯಿ, ಧರ್ಮಸ್ಥಳ ಕ್ಷೇತ್ರದ ಹೆಸರು ಹಾಳು ಮಾಡುವವರ ಮೊದಲ ಪ್ರಯತ್ನ ಮುಗಿದಿದೆ. ವ್ಯವಸ್ಥಿತ ಪಿತೂರಿ ನಡೆಸಿ, ಬುರುಡೆ ಕಥೆ ಕಟ್ಟಿ ಧರ್ಮಸ್ಥಳದ ಸುತ್ತಲಿನ ಪ್ರದೇಶ ಹಾಳು ಮಾಡಿದರು. ಅನಾಮಿಕ ವ್ಯಕ್ತಿ ಹೇಳಿದ್ದಾನೆಂದು ಸರ್ಕಾರವೂ ಎಸ್‌ಐಟಿ ರಚನೆ ಮಾಡಿ, ತನಿಖೆ ನಡೆಸಿತು. ಆದರೆ, ಬುರುಡೆ ಹಿಡಿದುಕೊಂಡು ಬಂದಾಗ, ಅದು ಯಾರ ಮೃತ ದೇಹದ್ದು ಎಂಬ ತನಿಖೆ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿಂದುಗಳ ಧಾರ್ಮಿಕ ಕ್ಷೇತ್ರಗಳಿಗೆ ಕೆಟ್ಟ ಹೆಸರು ತರಲು ಷಡ್ಯಂತ್ರ ನಡೆದಿದೆ. ಎಂತಹದ್ದೇ ಪಿತೂರಿ ನಡೆಸಿದರೂ ಹಿಂದು ಧರ್ಮಕ್ಕೆ ಏನೂ ಮಾಡಲು ಸಾಧ್ಯವಿಲ್ಲ. ಆದರೆ, ಪಿತೂರಿ ನಡೆಸುವ ತಂಡ ಸಕ್ರಿಯವಾಗಿದ್ದು, ಮುಂದೊಂದು ದಿನ ಸಿದ್ಧಾರೂಢಮಠಕ್ಕೂ ಬರಬಹುದು ಎಂದು ಎಚ್ಚರಿಸಿದರು. ಅಲ್ಲದೇ ಪಿತೂರಿ ನಡೆಸಿದ ದುಷ್ಟ ಶಕ್ತಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.

ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ ಮಾತನಾಡಿದರು.

ಉಪ ಮೇಯರ್ ಸಂತೋಷ ಚವ್ಹಾಣ, ವಿಎಕೆ ಫೌಂಡೇಷನ್ ಅಧ್ಯಕ್ಷ ವೆಂಕಟೇಶ ಕಾಟವೆ, ಮಾಜಿ ಶಾಸಕ ಅಶೋಕ ಕಾಟವೆ, ಮುಖಂಡರಾದ ರಾಜಣ್ಣ ಕೊರವಿ, ರಂಗಾ ಬದ್ದಿ, ಶಶಿಕಾಂತ ಬಿಜವಾಡ, ಶಿವು ಮೆಣಸಿನಕಾಯಿ, ಸಿದ್ದು ಮೊಗಲಿಶೆಟ್ಟರ್, ರವಿ ನಾಯ್ಕ, ರಾಜು ಕಾಳೆ, ಬೀರಪ್ಪ ಖಂಡೇಕರ, ಈಶ್ವರಗೌಡ ಪಾಟೀಲ, ರಾಜು ಕೋರ್ಯಾಣಮಠ, ಪರಶುರಾಮ ಪೂಜಾರ ಸೇರಿದಂತೆ ಬಹಳಷ್ಟು ಕಾರ್ಯಕರ್ತರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net