ಶೂ ಎಸೆದ ಪ್ರಕರಣ ಖಂಡಿಸಿ ಪ್ರತಿಭಟನೆ

ಕೊಡ್ಲಿಪೇಟೆಯಲ್ಲಿ ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಯಿತು.
ಕೊಡ್ಲಿಪೇಟೆಯಲ್ಲಿ ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಯಿತು.
Published on

ಶನಿವಾರಸಂತೆ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆದ ವಕೀಲ ರಾಕೇಶ್ ಕಿಶೋರ್‌ನನ್ನು ಬಂಧಿಸಿ ದೇಶದಿಂದಲೇ ಗಡಿಪಾರು ಮಾಡುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ಶನಿವಾರ ಪ್ರತಿಭಟನೆ ನಡೆಯಿತು.

ಕೊಡ್ಲಿಪೇಟೆಯ ಕಡೇಪೇಟೆ ಸರ್ಕಲ್ನಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಸಾಗಿಬಂದ ಪ್ರತಿಭಟನಾಕಾರರು ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ರಚಿಸಿದರು. ಈ ಸಂದರ್ಭ ವಕೀಲ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸಮಿತಿ ಯುವ ಮುಖಂಡ ಮೋಹನ್ ಮೌರ್ಯ ಮಾತನಾಡಿ, ಭಾರತದಲ್ಲಿ ಬಾಬಾ ಸಾಹೇಬರ ಸಂವಿಧಾನ ಆಡಳಿತದಲ್ಲಿದೆ. ಎರಡು ಸಾವಿರ ವರ್ಷಗಳ ಕಾಲ ಗುಲಾಮಗಿರಿಯಲ್ಲಿಟ್ಟು ಆಡಳಿತ ನಡೆಸಿದ ಮನುವಾದಿ ಸಂತತಿಯ ರಾಕೇಶ್ ಕಿಶೋರ್ ಎಂಬಾತನು ಮುಖ್ಯ ನ್ಯಾಯಮೂರ್ತಿಗೆ ಶೂ ಎಸೆದಿದ್ದಾನೆ. ಈ ದೇಶದಲ್ಲಿ ಹುಟ್ಟಿರುವ ಪ್ರತಿಯೊಬ್ಬರೂ ಡಾ.ಅಂಬೇಡ್ಕರ್ ಅವರ ಸಂವಿಧಾನವನ್ನು ಗೌರವಿಸಬೇಕು. ಪರ್ಯಾಯ ಸಂವಿಧಾನ ಜಾರಿಗೆ ತರಲು ಈವರೆಗೂ ಸಾಧ್ಯವಾಗಿಲ್ಲ. ಇದು ಈ ದೇಶದ ಮೇಲೆ ನಮಗಿರುವ ಸ್ವಾಭಿಮಾನವಾಗಿದ್ದು, ಇಂತಹ ದುಷ್ಕೃತ್ಯವನ್ನು ಬೆಂಬಲಿಸಿದ ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ್‌ರಾವ್ ಅವರನ್ನು ಬಿಜೆಪಿ ಈ ಕೂಡಲೇ ಪಕ್ಷದಿಂದ ಉಚ್ಚಾಟಿಸುವ ಮೂಲಕ ತಮ್ಮ ಪಕ್ಷಕ್ಕೆ ಸಂವಿಧಾನದ ಮೇಲೆ ಗೌರವವಿದೆ ಎಂದು ಸಾಬೀತು ಪಡಿಸಬೇಕೆಂದು ಆಗ್ರಹಿಸಿದರು.

ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕ ಜೆ.ಎಲ್.ಜನಾರ್ದನ್ ಮಾತನಾಡಿ, ಮುಖ್ಯ ನ್ಯಾಯಮೂರ್ತಿಗೆ ಶೂ ಎಸೆದ ದಿನ ಸಂವಿಧಾನಕ್ಕೆ ಆಗೌರವ ತೋರಿದ ದಿನವಾಗಿದೆ. ಈ ವಿಷಯದಲ್ಲಿ ಕೇಂದ್ರಸರ್ಕಾರ ಮತ್ತು ಗೃಹ ಸಚಿವರು ಮೌನ ವಹಿಸಿರುವುದು ನೋಡಿದರೆ ಇದರ ಹಿಂದಿನ ನಡೆ ಬೆಳಕಿಗೆ ಬಂದಿದೆ. ಇದಕ್ಕೆ ಕೇಂದ್ರದ ಸಂವಿಧಾನ ವಿರೋಧಿ ಧೋರಣೆಯೇ ಪ್ರೇರಣೆ ಎಂದು ಹೇಳಿದರು.

ಸ್ಥಳೀಯ ಯುವ ಮುಖಂಡ ಡಿ.ಎನ್.ವಸಂತ್ ಮಾತನಾಡಿ, ಬಾಬಾ ಸಾಹೇಬರ ಸಂವಿಧಾನದಲ್ಲಿರುವ ಮಹಿಳೆಯರಿಗೆ ಇರುವ ಹಕ್ಕು ಮನು ಸಂವಿಧಾನದಲ್ಲಿ ಇಲ್ಲ. ಸಂವಿಧಾನದಡಿ ಬದುಕುತ್ತಿರುವ ದೇಶದ ಪ್ರತಿಯೊಬ್ಬರೂ ಸಹ ಜಾತಿ ಮತ್ತು ಧರ್ಮ ಮರೆತು ಪ್ರತಿಭಟಿಸಬೇಕು. ರಾಕೇಶ್ ಕಿಶೋರ್‌ನಿಗೆ ಮುಂದಿನ ದಿನಗಳಲ್ಲಿ ಕೇಂದ ಸರ್ಕಾರ ರಾಜ್ಯಪಾಲ ಅಥವಾ ಇತರ ಸ್ಥಾನಮಾನ ನೀಡಿದರೂ ಅನುಮಾನವಿಲ್ಲ. ಇಂತಹ ಸಂವಿಧಾನ ವಿರೋಧಿ ಕ್ರೌರ್ಯವನ್ನು ಸರ್ಮರ್ಥಿಸಿದ ಭಾಸ್ಕರ್‌ರಾವ್ ಅವರನ್ನೂ ಸಹ ರಾಜ್ಯದಿಂದಲೇ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.

ವಲಯ ಕಾಂಗ್ರೆಸ್ ಅಧ್ಯಕ್ಷ ಔರಂಗಜೇಬ್ ಮಾತನಾಡಿ, ರಾಜ್ಯ ಸರ್ಕಾರ ನಡೆಸುತ್ತಿರುವ ಸಮೀಕ್ಷೆಯನ್ನು ವಿರೋಧಿಸುವವರು ಸಾಮಾಜಿಕ ನ್ಯಾಯದ ವಿರೋಧಿ ಮನಸ್ಥಿಯವರಾಗಿದ್ದು, ಅಂತಹವರು ಮಾತ್ರ ಈ ಕೃತ್ಯವನ್ನು ಬೆಂಬಲಿಸುತ್ತಾರೆ. ಘಟನೆ ಖಂಡಿಸಿ ದಲಿತರು ಮಾತ್ರ ಪ್ರತಿಭಟಿಸುವುದಲ್ಲ. ಬದಲಾಗಿ ಸಂವಿಧಾನದಡಿ ಬದುಕುತ್ತಿರುವ ಎಲ್ಲರೂ ಈ ಕೃತ್ಯವನ್ನು ಖಂಡಿಸಬೇಕು ಎಂದರು.

ನಂತರ ಪ್ರತಿಭಟನಾಕಾರರು ಕೊಡ್ಲಿಪೇಟೆ ನಾಡಕಚೇರಿಗೆ ತೆರಳಿ ಉಪತಹಸೀಲ್ದಾರ್ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಪ್ರಮುಖ ಡಿ.ಆರ್.ವೇದಕುಮಾರ್ ಮನವಿ ಪತ್ರ ಓದಿದರು. ಸಂಘನೆಯ ಪ್ರಮುಖರಾದ ಡಿ.ವಿ.ಜಗದೀಶ್, ವೀರಭದ್ರ, ಜಿಲ್ಲಾ ಮುಖಂಡರಾದ ಕೆ.ಬಿ.ರಾಜು, ಟಿ.ಇ.ಸುರೇಶ್, ಬೆಸೂರು ಪಂಚಾಯಿತಿ ಸದಸ್ಯ ಜಯರಾಜ್, ಯುವ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ನಿಸಾರ್, ಪ್ರಮುಖರಾದ ಅಬ್ದುಲ್ ರಹ್ಮಾನ್, ಸಾಬ್ಜಾನ್, ದಲಿತ ಮುಖಂಡರಾದ ಶಿವಲಿಂಗ, ಜೆ.ಸಿ.ರಾಜು, ಪ್ರಸನ್ನ ನೀರುಗುಂದ, ಜೆ.ಸಿ.ಹರೀಶ್, ಪಾಂಡು, ಕೆಂಚಪ್ಪ, ತಮ್ಮಯ್ಯ, ಸುರೇಶ್, ಸಿ.ಈ ಹರೀಶ್, ಸಂದೀಪ್ ,ಮಂಜು ಚಿಕ್ಕಬಂಡಾರ, ಡಿ.ಎನ್.ವಿಜಯ್, ರೂಪಾ, ವೇದಾವತಿ, ಡಿ.ಸಿ.ಸೋಮಣ್ಣ,ಕಾರ್ತಿಕ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net