ಕೃಷಿ ಪಂಪ್​ ಸೆಟ್ಟುಗಳಿಗೆ ರೈತರ ಆಧಾರ್​ ಸಂಖ್ಯೆ ಜೋಡಣೆ ಖಂಡಿಸಿ ಪ್ರತಿಭಟನೆ

4CBP2
Published on

ಚಿಕ್ಕಬಳ್ಳಾಪುರ: ಕೃಷಿ ಪಂಪ್​ ಸೆಟ್ಟುಗಳಿಗೆ ರೈತರ ಆಧಾರ್​ ಸಂಖ್ಯೆ ಜೋಡಣೆ ಖಂಡಿಸಿ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಬೆಸ್ಕಾಂ ಕಚೇರಿ ಎದುರು ಪ್ರತಿಭಟಿಸಿತು. ಇಲ್ಲಿನ ವಾಪಸಂದ್ರದಿಂದ ಅಂಬೇಡ್ಕರ್​ ವೃತ್ತದ ಮೂಲಕ ಪ್ರತಿಭಟನಾ ಮೆರವಣಿಗೆ ಹೊರಟ ರೈತರು, ಧಿಕ್ಕಾರಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ದರವನ್ನು ನಿಗದಿಪಡಿಸುವ ಸ್ವಾಮಿನಾಥನ್​ ವರದಿಯನ್ನು ಅನುಷ್ಠಾನಗೊಳಿಸಬೇಕೆಂಬ ಒತ್ತಾಯದ ಹೋರಾಟಗಳು ಹಲವು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿವೆ. ಆದರೂ ಕ್ರಮ ಕೈಗೊಂಡಿಲ್ಲ. ಇದರ ಬದಲಿಗೆ ಮಾರಕ ಕಾಯ್ದೆಗಳನ್ನು ಜಾರಿಗೆ ತರಲಾಗುತ್ತಿದೆ ಎಂದು ರೈತ ಸಂದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಭೈರೇಗೌಡ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಅಂತರ್ಜಲ ಮಟ್ಟ ಕುಸಿತ ಮತ್ತು ಮಳೆಯ ಅಭಾವದ ಹಿನ್ನೆಲೆಯಲ್ಲಿ ಕೊಳವೆ ಬಾವಿಗಳ ವೈಲ್ಯ ಹೆಚ್ಚಳವಾಗಿದೆ. ಇದರ ನಡುವೆ ಲಭ್ಯ ಅಲ್ಪ ಸ್ವಲ್ಪ ನೀರಿನಲ್ಲಿ ರೈತರು ಕೃಷಿ ಚಟುವಟಿಕೆ ಕೈಗೊಂಡು ಸಮೃದ್ಧಿ ಬೆಳೆಗಳನ್ನು ಬೆಳೆಯುತ್ತಿದ್ದು ಇದಕ್ಕೆ ನಿರ್ವಹಣೆ ವೆಚ್ಚಕ್ಕೆ ಅನುಗುಣವಾಗಿ ಸೂಕ್ತ ದರ ಮಾತ್ರ ಸಿಗುತ್ತಿಲ್ಲ. ಮತ್ತೊಂದೆಡೆ ಸರ್ಕಾರವು ಕೃಷಿ ಪಂಪ್​ ಸೆಟ್ಟುಗಳಿಗೆ ರೈತರ ಆಧಾರ್​ ಸಂಖ್ಯೆ ಜೋಡಿ, ನಾನಾ ಷರತ್ತುಗಳನ್ನು ವಿಧಿಸಲು ಮುಂದಾಗಿದೆ ಎಂದು ಟೀಕಿಸಿದರು.

ತ್ವರಿತ ಗತಿಯಲ್ಲಿ ಕೊಳವೆ ಬಾವಿಗಳಿಗೆ ವಿದ್ಯುತ್​ ಸಂಪರ್ಕ ಒದಗಿಸುವುದರ ಜತೆಗೆ ಇಲಾಖೆಯೇ ಕಂಬ, ವಿದ್ಯುತ್​ ಪರಿವರ್ತಕಗಳ ವೆಚ್ಚವನ್ನು ಭರಿಸಬೇಕು, ಬೆಸ್ಕಾಂ ಖಾಸಗೀಕರಣವನ್ನು ಕೈ ಬಿಡಬೇಕು. ಪ್ರತಿನಿತ್ಯ 10 ಗಂಟೆ ತ್ರಿಪೇಸ್​ ವಿದ್ಯುತ್​ ಪೂರೈಕೆ, ಸೂಕ್ತ ಬೆಳೆ ನಷ್ಟ ಪರಿಹಾರ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂದ ಜಿಲ್ಲಾಧ್ಯಕ್ಷ ರಾಮನಾಥ ರೆಡ್ಡಿ, ಪ್ರಧಾನ ಕಾರ್ಯದರ್ಶಿಗಳಾದ ವೇಣುಗೋಪಾಲ್​, ವೀರಾಪುರ ಮುನಿ ನಂಜಪ್ಪ, ಜಿಲ್ಲಾ ಜಂಟಿ ಕಾರ್ಯದರ್ಶಿ ಕುಪ್ಪಳ್ಳಿ ಶ್ರೀನಿವಾಸ್​ ಮತ್ತಿತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net