ಅವಹೇಳನಕಾರಿ ಹೇಳಿಕೆ ಖಂಡಿಸಿ ಪ್ರತಿಭಟನೆ

12 lxr 2
Published on

ಲಕ್ಷ್ಮೇಶ್ವರ: ಜೈನ ಧರ್ಮದ ಬಗ್ಗೆ ಅವಹೇಳನಕಾರಿ ಮತ್ತು ಧರ್ಮಸ್ಥಳಕ್ಕೆ ಕಳಂಕ ಹಚ್ಚುವ ರೀತಿಯಲ್ಲಿ ಮಾತನಾಡುವ ಕ್ರಮ ಖಂಡಿಸಿ ಪಟ್ಟಣದಲ್ಲಿ ದಿಗಂಬರ ಜೈನ ಸಮಾಜದಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ಒಡೆಯರ ಮಲ್ಲಾಪುರ ಗ್ರಾಪಂ ಸದಸ್ಯ ಪದ್ಮರಾಜ ಪಾಟೀಲ ಮಾತನಾಡಿ, ಜೈನ ಸಮಾಜ ಸತ್ಯ, ಶಾಂತಿ, ಅಹಿಂಸಾ ಧರ್ಮ ಪರಿಪಾಲನೆಗೆ ಹೆಸರಾಗಿದೆ. ಧರ್ಮಸ್ಥಳ ಕೇವಲ ಒಂದು ಜಾತಿ-ಜನಾಂಗಕ್ಕೆ ಸೇರಿದ ಧಾರ್ಮಿಕ ಕೇಂದ್ರವಲ್ಲ, ಬದಲಾಗಿ ಅದು ಎಲ್ಲ ಧರ್ಮದ ಕೋಟ್ಯಾಂತರ ಭಕ್ತರ ಶ್ರದ್ಧಾ ಕೇಂದ್ರವಾಗಿದೆ. ಧರ್ಮಸ್ಥಳದ ಧರ್ಮಾಧಿಕಾರಿಗಳು ತ್ರಿವಿಧ ದಾಸೋಹ ಸೇವೆಯ ಜತೆಗೆ ನಾಡಿನ ದೇವಾಲಯಗಳ ಜೀರ್ಣೋದ್ದಾರ. ಕೆರೆಗಳ ಪುನಶ್ಚೇತನ, ವ್ಯಸನಮುಕ್ತ ಸಮಾಜಕ್ಕಾಗಿ ಶ್ರಮಿಸುತ್ತಿದ್ದಾರೆ. ಸ್ವಸಹಾಯ ಸಂಘಗಳು ಲಾಭದ ಉದ್ದೇಶಕ್ಕಾಗಿರದೇ ಗ್ರಾಮೀಣ ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಹಾಗೂ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗಾಗಿ ಸಮರ್ಪಿಸಿಕೊಂಡಿದೆ. ಆದಾಗ್ಯೂ ಕೆಟ್ಟ ಉದ್ದೇಶದಿಂದ ಪವಿತ್ರ ಕ್ಷೇತ್ರಕ್ಕೆ ಕಳಂಕ ಹಚ್ಚುವ ಹೀನ ಕೃತ್ಯವನ್ನು ಜೈನ ಸಮಾಜ ಖಂಡಿಸುತ್ತದೆ. ಗಿರೀಶ ಮಟ್ಟಣ್ಣವರ ವಿರುದ್ಧ ದೂರು ಸಲ್ಲಿಸಲಾಗುವುದು. ಪೊಲೀಸರು ಕಾನೂನು ಕ್ರಮ ಕೈಗೊಳ್ಳಬೇಕು. ಎಸ್‌ಐಟಿ ತನಿಖೆ ಬಗ್ಗೆ ಸರ್ಕಾರವು ಕೂಡಲೇ ಪಾರದರ್ಶಕ ಮತ್ತು ಸ್ಪಷ್ಟ ನಿಲುವು ತೆಗೆದುಕೊಂಡು ಕ್ಷೇತ್ರದ ಬಗ್ಗೆ ಅಪಪ್ರಚಾರ ಹಾಗೂ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿರುವರ ಬಾಯಿ ಮುಚ್ಚಿಸಬೇಕು ಎಂದರು.

ನಂದಕುಮಾರ ಪಾಟೀಲ ಹಾಗೂ ವಿನಯ ಪಾಟೀಲ ಮಾತನಾಡಿ, ಈ ಹುನ್ನಾರ ನಿಲ್ಲದಿದ್ದರೆ ಜೈನ ಸಮಾಜದಿಂದ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದರು. ತಹಸೀಲ್ದಾರ್ ಧನಂಜಯ ಎಂ., ಅವರಿಗೆ ಮನವಿ ಸಲ್ಲಿಸಲಾಯಿತು.

ವಕೀಲರಾದ ಎ.ಬಿ ಪಾಟೀಲ, ಆರ್.ಸಿ. ಪಾಟೀಲ, ಬಿ.ಎಫ್ ಘೋಂಗಡಿ, ಸಮಾಜದ ಭರತಣ್ಣ ಬರಿಗಾಲಿ, ವಸಂತ ಪಾಟೀಲ, ಅನಂತರಾಜ ಮಿಣಜಿಗಿ, ವೈಭವ ಗೋಗಿ, ವಸಂತ ಪಾಟೀಲ, ಮಹಾವೀರ ಪಾಟೀಲ, ಸುನೀಲ ಪಾಟೀಲ, ಅಜೀತ ಬರಗಾಲಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net