ಮನೆ ವಿತರಣೆಗಾಗಿ ಬಂಕಾಪುರ ಪುರಸಭೆ ಆವರಣದಲ್ಲಿ ಮಹಿಳೆಯರಿಂದ ಪ್ರತಿಭಟನೆ

BANKAPUR PROTEST
Published on

ಶಿಗ್ಗಾಂವಿ(ಗ್ರಾ): ಪಟ್ಟಣದ ದೇಸಾಯಿ ಪ್ಲಾಟ್‌ನಲ್ಲಿ ನಿರ್ಮಾಣಗೊಂಡಿರುವ ಜಿ+1 ಮಾದರಿ ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ಕೂಡಲೇ ವಿತರಿಸಬೇಕು ಎಂದು ಆಗ್ರಹಿಸಿ ಪಟ್ಟಣದ ಫಲಾನುಭವಿಗಳು ಬೆಳಗ್ಗೆಯಿಂದ ಸಂಜೆಯವರೆಗೆ ಪುರಸಭೆ ಆವರಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.


ಮೇ ತಿಂಗಳಲ್ಲಿಯೇ ಹಂಚಿಕೆಗೆ ನಿಗದಿಯಾಗಿದ್ದ ಮನೆಗಳನ್ನು ಇನ್ನೂ ಏಕೆ ಹಂಚಿಕೆ ಮಾಡುತ್ತಿಲ್ಲ.

ಈಗಾಗಲೇ 8-10ವರ್ಷಗಳಿಂದ ಬಾಡಿಗೆ ಮನೆಯಲ್ಲಿ ವಾಸವಾಗಿರುವ ನಮಗೆ ಕೂಡಲೇ ಮನೆ ಹಂಚಿಕೆ ಮಾಡಬೇಕು ಎಂದು ಪ್ರತಿಭಟನಾಕಾರರು ಪುರಸಭೆ ಅಧಿಕಾರಿಗಳನ್ನು ಆಗ್ರಹಿಸಿದರು.


ಪುರಸಭೆ ಅಧಿಕಾರಿಗಳು ಮತ್ತು ಸದಸ್ಯರು ಪ್ರತಿಭಟನಾ ನಿರತ ಮಹಿಳೆಯರ ನಡುವೆ ನಡೆದ ಸಂಧಾನ ವಿಫಲವಾದ ಹಿನ್ನಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಪ್ರಶಾಂತ ಕುಲಕರ್ಣಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದರು.

ಈಗಾಗಲೇ ನಿರ್ಮಾಣಗೊಂಡಿರುವ ಮನೆಗಳ ಸಣ್ಣ ಪುಟ್ಟ ಕೆಲಸ ಬಾಕಿ ಇರುವ ಕಾರಣ ಗುತ್ತಿಗೆದಾರರು 15 ದಿನಗಳ ಕಾಲಾವಕಾಶ ಕೇಳಿದ್ದಾರೆ. ಅದರ ನಂತರ ಹತ್ತು ದಿನಗಳಲ್ಲಿ ಎಲ್ಲ ಅರ್ಹ ಫಲಾನುಭವಿಗಳಿಗೆ ಮನೆಗಳನ್ನು ವಿತರಿಸಲಾಗುವುದು ಎಂದು ಭರವಸೆ ನೀಡಿದರು. ನಂತರ ಪ್ರತಿಭಟನೆ ಹಿಂಪಡೆಯಲಾಯಿತು.


ಸಾವಿತ್ರಿ ಸಾತನೂರ, ಅಬ್ದುಲ್ ರಜಾಕ್, ಎಂ.ಎ. ಬಿರ್ಜೆಕರ, ಶಿವಾಲಿ ಧನವೆ, ರೇಣುಕಾ ಕುಂದೂರ, ರತ್ನವ್ವ ಚಲವಾದಿ, ಫರ್ವಿನ್‌ಬಾನು ಜಮಾದಾರ, ಲಕ್ಷ್ಮೀ ಪನಿಮರ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net