ಖಾಲಿ ಚೊಂಬು ಪ್ರದರ್ಶಿಸಿ ಮಹಿಳೆಯರಿಂದ ಪ್ರತಿಭಟನೆ

16
Published on

ಮೈಸೂರು: ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್‌ನಲ್ಲಿ ಕನ್ನಡಿಗರಿಗೆ ಮೋಸವಾಗಿದೆ ಎಂದು ಆರೋಪಿಸಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು ಖಾಲಿ ಚೊಂಬು ಪ್ರದರ್ಶಿಸುವ ಮೂಲಕ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ನಗರದ ಕಾಂಗ್ರೆಸ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಕಾಯಕರ್ತೆಯರು, ಕರ್ನಾಟಕದ ಯೋಜನೆಗೆ ಕೇಂದ್ರದಿಂದ ಒಂದೇ ಒಂದು ಯೋಜನೆ ಅನುದಾನ ಕೊಟ್ಟಿಲ್ಲ. ಬಿಜೆಪಿ ಮತ್ತು ಜೆಡಿಎಸ್‌ನಿಂದ 19 ಸಂಸದರು ಗೆದ್ದು ಹೋಗಿದ್ದರೂ ಮನ್ನಣೆ ನೀಡಿಲ್ಲ ಎಂದು ದೂರಿದರು.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಹಲವು ರಾಜ್ಯಕ್ಕೆ ಅಮೃತವಾಗಿದೆ ಎಂದು ಹೇಳಿಕೆ ನೀಡುತ್ತಾರೆ. ಆದರೆ ಈ ಬಜೆಟ್ ಕರ್ನಾಟಕಕ್ಕೆ ಖಾಲಿ ಚೊಂಬು ಕೊಟ್ಟಿದೆ. ನೀರು, ಭಾಷೆ, ಅಭಿವೃದ್ಧಿ ವಿಚಾರ ಯೋಜನೆಗೆ ಒಂದೇ ಒಂದು ಅನುದಾನ ಇಲ್ಲ ಎಂದು ದೂರಿದರು.
ಕೇವಲ ಮಿತ್ರಪಕ್ಷ ರಾಜ್ಯಗಳಿಗೆ ಮಾತ್ರ ಕೇಂದ್ರ ಬಿಜೆಪಿ ಸರ್ಕಾರ ಅನುದಾನ ಕೊಟ್ಟು, ಒಕ್ಕೂಟ ವ್ಯವಸ್ಥೆಯಲ್ಲಿ ಹಲವು ರಾಜ್ಯಕ್ಕೆ ಮೋಸ ಮಾಡಿದ್ದಾರೆ. ಕನ್ನಡಿಗರು ನಾವು ಸ್ವಾಭಿಮಾನಿಗಳು, ನಮ್ಮ ತೆರಿಗೆ ನಮ್ಮ ಹಕ್ಕು, ಕರ್ನಾಟಕ ರಾಜ್ಯದಿಂದ ನಾವು ಹೆಚ್ಚು ತೆರಿಗೆ ಕೊಡುತ್ತೇವೆ. ಇವರೆಲ್ಲ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು ಎಂದು ಆಗ್ರಹಿಸಿದರು.
ಕೇಂದ್ರದ ಈ ಕ್ರಮ ಖಂಡಿಸಿ ಕಾಂಗ್ರೆಸ್‌ನ ಸಂಸದರು ಸಂಸತ್ತಿನಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ನಾವು ಯಾವತ್ತೂ ಕೈಕಟ್ಟಿ ಕುಳಿತಿಲ್ಲ, ಕೇಂದ್ರದಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದರು.
ಕುಮಾರಸ್ವಾಮಿ ಅವರು ಕೇಂದ್ರ ಮಂತ್ರಿಯಾಗಿ ರಾಜ್ಯಕ್ಕೆ ಆಗಿರುವ ಅನ್ಯಾಯದ ವಿರುದ್ಧ ಮಾತನಾಡುತ್ತಿಲ್ಲ, ಸೋತು ಅವರ ಮುಂದೆ ಕೈಕಟ್ಟಿ ನಿಂತಿದ್ದಾರೆ. ಪ್ರಧಾನಿ ನರೇಂದ್ರಮೋದಿ ಅವರ ಮುಂದೆ ಹೋರಾಟ ಮಾಡಿ ರಾಜ್ಯಕ್ಕೆ ಅನುದಾನ ತರಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷರೂ ಅದ ಗ್ಯಾರಂಟಿ ಅನುಷ್ಠಾನ ಸಮಿತಿ ರಾಜ್ಯ ಉಪಾಧ್ಯಕ್ಷೆ ಬಿ.ಪುಷ್ಪಾ ಅಮರನಾಥ್, ಕೆಪಿಸಿಸಿ ಮಹಿಳಾ ಉಪಾಧ್ಯಕ್ಷರಾದ ಪುಷ್ಪವಲ್ಲಿ, ನಗರ ಮಹಿಳಾ ಅಧ್ಯಕ್ಷೆ ಪುಷ್ಪಲತಾ ಚಿಕ್ಕಣ್ಣ, ಗ್ರಾಮಾಂತರ ಅಧ್ಯಕ್ಷೆ ಲತಾ ಸಿದ್ದಶೆಟ್ಟಿ, ಮಾಜಿ ಮೇಯರ್‌ಗಳಾದ ಮೋದಾಮಣಿ, ಪುಷ್ಪಲತಾ ಜಗನ್ನಾಥ್, ಪ್ರಮುಖರಾದ ನಾಗರತ್ನಾ, ಮಂಜುಳಾ, ಸುಶೀಲಾ ನಂಜಪ್ಪ, ಭವ್ಯಾ, ಇಂದ್ರ, ರಾಧಾಮಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net