ಬ್ಯಾಡಗಿಯಲ್ಲಿ ಎಮ್ಮೆ ಮೈತೊಳೆದು ಪ್ರತಿಭಟನೆ

Protest in byadagi
Published on

ಬ್ಯಾಡಗಿ: ಪಟ್ಟಣದ ಗಜೇಂದ್ರಗಡ-ಸೊರಬ ರಸ್ತೆಯನ್ನು ವಿಸ್ತರಣೆಗೊಳಿಸುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ರಸ್ತೆ ಮೇಲೆ ಎಮ್ಮೆಗಳ ಮೈತೊಳೆಯುವ ಮೂಲಕ ಬುಧವಾರ ವಿನೂತನ ಪ್ರತಿಭಟನೆ ನಡೆಸಲಾಯಿತು.

ರಸ್ತೆ ವಿಸ್ತರಣೆ ಹೋರಾಟ ಸಮಿತಿ ಅಧ್ಯಕ್ಷ ಸುರೇಶ ಚಲವಾದಿ ಮಾತನಾಡಿ, ಎರಡು ದಶಕಗಳ ಕಾಲ ರಸ್ತೆ ವಿಸ್ತರಣೆಗೆ ಆಗ್ರಹಿಸಿ ಹಲವು ಬಾರಿ ಹೋರಾಟ ನಡೆಸಲಾಗಿದೆ. ವಾರಗಟ್ಟಲೆ ಉಪವಾಸ ಸತ್ಯಾಗ್ರಹ ಕುಳಿತರೂ ಪ್ರಯೋಜನವಾಗಿಲ್ಲ, ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ಜನಪ್ರತಿನಿಧಿಗಳು, ಲೋಕೋಪಯೋಗಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ರಸ್ತೆ ವಿಸ್ತರಣೆಯಾಗದೆ ಹಾಗೆಯೇ ಉಳಿದಿದೆ. ಜಿಲ್ಲಾಧಿಕಾರಿ ಮಳೆಗಾಲದಲ್ಲಿ ಸ್ಥಳಕ್ಕೆ ಭೇಟಿ ನೀಡಿ, ವಾಸ್ತವ ಸ್ಥಿತಿಯನ್ನು ಪರಿಶೀಲಿಸಿ ಸಾರ್ವಜನಿಕರಿಗೆ ನ್ಯಾಯ ಒದಗಿಸಲಿ. ಹಿಂದೆ ಪ್ರತಿಭಟನೆ ನಡೆಸಿದಾಗ ಜಿಲ್ಲಾಧಿಕಾರಿಗಳೇ ಭರವಸೆ ನೀಡಿದ್ದರು. ಸ್ಥಳೀಯ ಜನರ ಹಿತ ಕಾಯುವಲ್ಲಿ ಎಲ್ಲರೂ ನಿರ್ಲಕ್ಷ್ಯಭಾವನೆ ತೋರಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ತಾಲೂಕಾಧ್ಯಕ್ಷ ಅಧ್ಯಕ್ಷ ಶಿವಯೋಗಿ ಶಿರೂರು ಮಾತನಾಡಿ, ಬ್ಯಾಡಗಿ ಮುಖ್ಯರಸ್ತೆ ಕೆಸರಿನ ಗದ್ದೆಯಂತಾಗಿದೆ. ಪ್ರತಿಯೊಬ್ಬ ನಾಗರಿಕರು ಸೇರಿದಂತೆ ಪರಸ್ಥಳದ ಜನರಿಗೂ ರಸ್ತೆಯ ಬಗ್ಗೆ ತೀವ್ರ ಬೇಸರವಾಗಿದೆ. ಎಲ್ಲಿ ನೋಡಿದರೂ ಕೆಸರು, ರಸ್ತೆ ಗುಂಡಿಗಳು, ಚರಂಡಿಯ ಕೊಳೆ ನೀರು ನೋಡಿ ನಾಗರಿಕರು ಲೋಕೋಪಯೋಗಿ ಅಧಿಕಾರಿಗಳು ಇದ್ದಾರೋ ಇಲ್ಲವೋ ಎನ್ನುತ್ತಿದ್ದಾರೆ. ಈ ಕುರಿತು ಸಾರ್ವಜನಿಕರು, ಹೋರಾಟಗಾರರು ಪ್ರಶ್ನಿಸಿದರೆ ಅಧಿಕಾರಿಗಳು ಹಾರಿಕೆಯ ಉತ್ತರ ನೀಡುವ ಮೂಲಕ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಅಧಿಕಾರಿಗಳು ನ್ಯಾಯಾಲಯದ ಹೆಸರು ಹೇಳುವ ಮೂಲಕ ಸ್ಥಳೀಯ ಅಭಿವೃದ್ಧಿಯನ್ನು ಕಡೆಗಣಿಸಿದ್ದಾರೆ ಎಂದು ಆರೋಪಿಸಿದರು.

ರೈತ ಮುಖಂಡ ಶಿವು ಕಲ್ಲಾಪುರ, ಈಶ್ವರ ಮಠದ, ಪುರಸಭೆ ಸದಸ್ಯ ಸುಭಾಸ ಮಾಳಗಿ, ಪಾಂಡುರಂಗ ಸುತಾರ, ಸುರೇಶ ಕುಡುಕೆರ, ಪಾಂಡುರಂಗ ಸುತಾರ, ಫರೀದಾಬಾನು ನದಿಮುಲ್ಲಾ, ವಿನಾಯಕ ಕಂಬಳಿ, ಮೋಹನ ಬಿನ್ನಾಳ ಇತರರಿದ್ದರು.

ನಿರ್ಲಕ್ಷ್ಯ ಧೋರಣೆಗೆ ಖಂಡನೆ

ಸ್ಥಳೀಯ ರೈತರು ಎಮ್ಮೆಗಳನ್ನು ಮುಖ್ಯ ರಸ್ತೆಯಲ್ಲಿ ತಂದು ಮೈತೊಳೆದು ಪ್ರತಿಭಟನೆ ನಡೆಸಿದರು. ರಸ್ತೆ ಗುಂಡಿಯಲ್ಲಿ ನಿಂತ ನೀರನ್ನು ಬಕೆಟ್​ನಲ್ಲಿ ಮೊಗೆದು ಎಮ್ಮೆಯ ಮೇಲೆ ಸುರಿದು ಆಕ್ರೋಶ ಹೊರಹಾಕಿದರು. ಇದರಿಂದ ಕೆಲಕಾಲ ಮುಖ್ಯರಸ್ತೆ ಬಂದ್ ಆಗಿತ್ತು. ಪಿಡಬ್ಲುಡಿ ಇಂಜಿನಿಯರ್​ಗಳ ನಿರ್ಲಕ್ಷ್ಯಧೋರಣೆ ಖಂಡಿಸುವ ಮೂಲಕ ಆ. 15ರೊಳಗಾಗಿ ರಸ್ತೆ ವಿಸ್ತರಣೆ ಕುರಿತು ಸಂದೇಶ ಬಾರದಿದ್ದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುವ ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net