

ಮೈಸೂರು: ನಾಗಮಂಗಲದಲ್ಲಿ ಗಣಪತಿ ವಿಸರ್ಜನೆ ಮೆರವಣಿಗೆಯ ಸಂದರ್ಭ ನಡೆದಿರುವ ಕೋಮು ಗಲಭೆಯನ್ನು ಖಂಡಿಸಿ ವಿಶ್ವ ಹಿಂದು ಪರಿಷತ್ ಹಾಗೂ ರಾಜಸ್ಥಾನ್ ಸಂಘಟನೆಯಿಂದ ಗುರುವಾರ ಪ್ರತಿಭಟನೆ ನಡೆಯಿತು.
ನಗರದ ಸಿದ್ದಾರ್ಥ ನಗರದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಜಮಾವಣೆಗೊಂಡ ಪ್ರತಿಭಟನಾಕಾರರು ನಾನಾ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಭಾರತದ ಹಿಂದುಗಳು ಯಾವಾಗಲೂ ಶಾಂತಿಪ್ರಿಯರು ಮತ್ತು ಎಲ್ಲ ಧರ್ಮದ ಜನರ ಜತೆ ಹೊಂದಾಣಿಕೆಯಿಂದ ಬದುಕುತ್ತಾರೆ. ಕರ್ನಾಟಕದಲ್ಲೂ ಹಿಂದುಗಳು ಎಲ್ಲ ಧರ್ಮೀಯರ ಜತೆ ಉತ್ತಮ ಸಾಮರಸ್ಯದೊಂದಿಗೆ ಜೀವನ ನಡೆಸುತ್ತಿದ್ದಾರೆ. ಎಲ್ಲ ಧರ್ಮೀಯರ ಹಬ್ಬ-ಹರಿದಿನಕ್ಕೆ ಪ್ರತಿಯೊಬ್ಬ ಭಾರತೀಯನು ಸಹಕರಿಸಲೇಬೇಕು. ಇದು ನಮ್ಮ ಭಾರತೀಯರ ಸಂಸ್ಕ್ರತಿಯೂ ಹೌದು. ಪರಧರ್ಮೀಯರ ಯಾವುದೇ ಹಬ್ಬ-ಹರಿದಿನಕ್ಕೆ ಹಿಂದುಗಳು ಎಂದೂ ತೊಂದರೆ ಕೊಡುವುದಿಲ್ಲ. ಆದರೆ, ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ಬೇರೆ ಧರ್ಮದವರು ವ್ಯವಸ್ಥಿತ ಪಿತೂರಿ ಮಾಡಿ ಹಿಂದುಗಳ ಮೇಲೆ ಹಾಗೂ ಗಣೇಶ ವಿಗ್ರಹದ ಮೇಲೆ ದಾಳಿ ಮಾಡಿದ್ದಲ್ಲದೇ ಹಿಂದು ಅಂಗಡಿ-ಮುಂಗಟ್ಟುಗಳನ್ನು ಹಾಳು ಮಾಡಿದ್ದಾರೆ ಎಂದು ದೂರಿದರು.
ಈ ಪ್ರಕರಣದಿಂದ ಅಂಗಡಿಗಳು ಸಂಪೂರ್ಣವಾಗಿ ಸುಟ್ಟುಹೋಗಿದ್ದು, ಮಾಲೀಕರ ಬದುಕು ಬೀದಿಗೆ ಬಂದಿದೆ. ಇದರ ಸಂಪೂರ್ಣ ನಷ್ಟವನ್ನು ರಾಜ್ಯ ಸರ್ಕಾರವೇ ಭರಿಸಬೇಕು. ಭದ್ರತೆ ನೀಡುವಲ್ಲಿ ಪೊಲೀಸ್ ಇಲಾಖೆ ಹಾಗೂ ಮಂಡ್ಯ ಜಿಲ್ಲಾಡಳಿತ ಸಂಪೂರ್ಣವಾಗಿ ವಿಫಲವಾಗಿದೆ. ಒಂದು ವರ್ಗದವರನ್ನು ತುಷ್ಟೀಕರಣ ಮಾಡಲು ಹೋಗಿ ಈ ಘಟನೆ ನಡೆದಿದೆ. ಈ ಘಟನೆಯ ಸಂಪೂರ್ಣ ಹೊಣೆಯನ್ನು ಸರ್ಕಾರ ಹೊರಬೇಕಿದೆ ಎಂದು ಆಗ್ರಹಿಸಿದರು.
ಈ ಘಟನೆಯಲ್ಲಿ ಪಾಲ್ಗೊಂಡಿರುವ ಪ್ರತಿಯೊಬ್ಬ ತಪ್ಪಿತಸ್ಥನನ್ನು ವಿಡಿಯೋ ಆಧರಿಸಿ ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.
ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷ ಮಹೇಶ್, ಕಾರ್ಯದರ್ಶಿ ಮಧುಶಂಕರ್, ವಿಭಾಗ ಸಂಚಾಲಕಿ ಸವಿತಾ ಘಾಟ್ಕೆ, ಪ್ರಮುಖರಾದ ಅಂಬಿಕಾ ಜೀವನ್ ಮಿತ್ರ, ಜನಾರ್ದನ್, ಗಿರಿಧರ್, ಮುರಳಿ, ಲೋಹಿತ್, ಡಾ.ಕೃಷ್ಣಮೂರ್ತಿ, ಶಿವು, ರಾಣಿ, ಚೇತನ್ ಮಂಜುನಾಥ್, ಭಾಗ್ಯ ಇತರರಿದ್ದರು.