

ಚನ್ನಗಿರಿ: ತಾಲೂಕಿನ ಸುಣಗೆರೆ ಗ್ರಾಮದ ಸರ್ಕಾರಿ ಗೋಮಾಳ ಜಮೀನನ್ನು ಅಜ್ಜಿಹಳ್ಳಿ ಗ್ರಾಮಸ್ಥರು ಅಕ್ರಮವಾಗಿ ಸಾಗುವಳಿ ಮಾಡುತ್ತಿದ್ದಾರೆ. ಈ ಕೂಡಲೇ ಗೋಮಾಳ ಜಮೀನು ಉಳಿಸಿಕೊಡುವಂತೆ ಸುಣಗೆರೆ ಗ್ರಾಮಸ್ಥರು ತಾಲೂಕು ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಪಿ.ಎಸ್. ಯರ‌್ರಿಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸುಣಗೆರೆ ಗ್ರಾಮದ ಮುಖಂಡ ಶಶಿಕುಮಾರ್, ಸರ್ಕಾರದ ಒಡೆತನದಲ್ಲಿರುವಂತಹ ಜಮೀನುಗಳನ್ನು ಕೆಲವರು ಆಕ್ರಮಿಸಿಕೊಂಡು ತಮ್ಮ ಒಡೆತನದಲ್ಲಿ ಇಟ್ಟುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು.
ಸುಣಗೆರೆ ಗ್ರಾಮದ ಸರ್ವೇ ನಂ.58 ಹಾಗೂ 59ರಲ್ಲಿ ಸುಮಾರು 57 ಎಕರೆ ಜಮೀನು ಗೋಮಾಳವಿದೆ. ಪಕ್ಕದ ಅಜ್ಜಿಹಳ್ಳಿ ಗ್ರಾಮದವರು ಗೋಮಾಳವನ್ನು ಭಾಗ ಮಾಡಿಕೊಂಡು ಕೃಷಿ ಜಮೀನು ಮಾಡಿಕೊಳ್ಳಲು ಸಂಚು ನಡೆಸಿ ಅಕ್ರಮವಾಗಿ ಸಾಗುವಳಿ ಪ್ರಾರಂಭಿಸಿದ್ದಾರೆ ಎಂದು ದೂರಿದರು.
ಸಹಕಾರ ಸಂಘದ ನಿರ್ದೇಶಕ ಬಿ.ಎಂ. ಉಮೇಶ್ ಮಾತನಾಡಿ, ಗ್ರಾಮದಲ್ಲಿರುವ ಸರ್ಕಾರಿ ಗೋಮಾಳವನ್ನು ಅನೇಕ ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದೇವೆ. ಪಕ್ಕದ ಗ್ರಾಮದವರು ಯಾರ ಗಮನಕ್ಕೂ ಬಾರದ ರೀತಿ ಸಾಗುವಳಿ ಮಾಡುತ್ತಿರುವುದು ಸರಿಯಲ್ಲ. ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ನೀಡಲಾಗಿದ್ದು, ಗೋಮಾಳ ಉಳಿಸುವವರೆಗೆೆ ಹೋರಾಟ ನಿಲ್ಲಿಸುವುದಿಲ್ಲ ಎಂದರು.
ಪ್ರತಿಭಟನೆಯಲ್ಲಿ ಚಂದ್ರನಾಯ್ಕ, ಮಲ್ಲೇಶಪ್ಪ, ಗುರುಶಾಂತಪ್ಪ, ಯೋಗೇಶ್, ಮಹೇಶ್, ಶಿವಕುಮಾರ್, ಎಲ್‌ಐಸಿ ಮಹೇಶ್ ಇದ್ದರು.