

ಮಂಡ್ಯ: ಶ್ರೀರಂಗಪಟ್ಟಣ ತಾಲೂಕು ಹಳೆ ಕಿರಂಗೂರು ಗ್ರಾಮದ ಶ್ರೀರಾಮದೇವರ ದೇವಸ್ಥಾನದ ವಿಚಾರದಲ್ಲಿ ಪೂರ್ವಾಗ್ರಹ ಒತ್ತಡಕ್ಕೆ ಸಿಲುಕದೆ ವಾಸ್ತವ ಪರಿಸ್ಥಿತಿ ಆಧಾರದ ಮೇಲೆ ನ್ಯಾಯ ದೊರಕಿಸಬೇಕೆಂದು ಆಗ್ರಹಿಸಿ ರೈತ ಸಂಘದ ನೇತೃತ್ವದಲ್ಲಿ ಗ್ರಾಮಸ್ಥರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿ ಗ್ರಾಮಸ್ಥರು ಹಾಗೂ ರೈತ ಸಂಘದ ಕಾರ್ಯಕರ್ತರು ನ್ಯಾಯ ಕೊಡಿಸಬೇಕೆಂದು ಆಗ್ರಹಿಸಿ ಘೋಷಣೆ ಕೂಗಿದರು. ಗ್ರಾಮದ ಈರೇಗೌಡ ಅವರು ದೇವಸ್ಥಾನದ ವಹಿವಾಟುದಾರರೆಂದು ಭೂ ನ್ಯಾಯ ಮಂಡಳಿ ಮತ್ತು ಹಲವು ನ್ಯಾಯಾಲಯದಲ್ಲಿ ಉಲ್ಲೇಖವಾಗಿದೆ. ಸುಮಾರು 60 ರಿಂದ 70 ವರ್ಷದಿಂದ ಯಾವುದೇ ಆದಾಯ ಮೂಲವಿಲ್ಲದೆ, ಇದ್ದ ಅಲ್ಪಸ್ವಲ್ಪ ಆದಾಯದ ಮೂಲಕ ಪ್ರತಿ ವರ್ಷ ಪುರೋಹಿತರಿಗೆ 9 ಪಲ್ಲ ಭತ್ತ ಕೊಡುವ ಮೂಲಕ ಪೂಜೆ ಪುನಸ್ಕಾರ ಕಾರ್ಯ ನಡೆಸಿಕೊಂಡು ಬರುವ ಕಾರ್ಯವನ್ನು ಈರೇಗೌಡ ಮತ್ತು ಅವರ ಮಕ್ಕಳು ನಡೆಸಿಕೊಂಡು ಬರುತ್ತಿದ್ದಾರೆ. ಅತಿ ಸಣ್ಣ ರೈತ ಕುಟುಂಬವಾದರೂ ಹಿರಿಯರು ಮಾಡಿಕೊಂಡು ಬರುತ್ತಿದ್ದ ಧಾರ್ಮಿಕ ಆಚರಣೆಯನ್ನು ಮಾಡಿಕೊಂಡು ಬರುತ್ತಿದ್ದಾರೆ. ದೇವಸ್ಥಾನದ ಅಕ್ಕಪಕ್ಕ ವಾಸದ ಮನೆಗಳನ್ನು ಕುಟುಂಬದವರು ತಮ್ಮ ಪರಿಶ್ರಮದ ಮೂಲಕ ನಿರ್ಮಿಸಿ ಅಧಿಕೃತವಾಗಿ ವಿದ್ಯುಚ್ಛಕ್ತಿ ಇಲಾಖೆಯಿಂದ 1969-70 ರಲ್ಲಿ ಈರೇಗೌಡರ ಹೆಸರಿನಲ್ಲಿ ಕಾನೂನು ಬದ್ಧವಾಗಿ ವಿದ್ಯುತ್ ಸಂಪರ್ಕ ಪಡೆದಿರುತ್ತಾರೆ. ಪ್ರಸ್ತುತ ವರ್ಷದಲ್ಲಿ ಸುಮಾರು 9 ಲಕ್ಷ ರೂ ವೆಚ್ಚದಲ್ಲಿ ಕಾಂಪೌಂಡ್ ನಿರ್ಮಿಸಿದ್ದಾರೆ. ಹಿಂದಿನಿಂದ ಇಲ್ಲಿಯವರೆಗೆ ಈ ಆಸ್ತಿಗೆ ಧಾರ್ಮಿಕ ದತ್ತಿ ಇಲಾಖೆಯಿಂದ ಯಾವುದೇ ಅನುದಾನ ನೀಡಿಲ್ಲ ಎಂದರು.
ಖಾಸಗಿ ಲೇವಾದೇವಿಯವರು ಮಾನವೀಯತೆ ಮೀರಿ, ಯಾವುದೇ ರೀತಿ ನೀತಿ ಇಲ್ಲದೆ, ಕಾನೂನು ಪರಿಪಾಲನೆ ಇಲ್ಲದೆ ನಡೆದುಕೊಳ್ಳುವ ರೀತಿ ಜಿಲ್ಲಾಡಳಿತದ ಸೂಚನೆಯಂತೆ ಧಾರ್ಮಿಕ ದತ್ತಿ ಇಲಾಖೆಯ ಕಾರ್ಯನಿರ್ವಹಣಾಧಿಕಾರಿ ತಹಸೀಲ್ದಾರ್ ಹಾಗೂ ಪೊಲೀಸ್ ಇಲಾಖೆಯವರು ವರ್ತಿಸಿದ್ದಾರೆ. ಈರೇಗೌಡ ಅವರು ವಾಸಿಸುತ್ತಿದ್ದ ಮನೆಯಲ್ಲಿದ್ದ ಬದುಕಿನ ಅವಶ್ಯಕತೆಗೆ ಬೇಕಾದ ಸಾಮಗ್ರಿಗಳನ್ನು ಸೇರಿ ಬೀಗಮುದ್ರೆ ಹಾಕಿ, ಅಮಾಯಕ ಹೆಣ್ಣು ಮಕ್ಕಳನ್ನು ಹೊರಗೆ ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ವಾಧೀನ ಪಡೆಯುವ ಆದೇಶದಲ್ಲಿ ನಿರ್ದಿಷ್ಟವಾಗಿ ಸ್ವಾಧೀನ ಮಾಡಿಕೊಳ್ಳುವ ಆಸ್ತಿಯ ವಿವರ ಇರಬೇಕಾಗಿತ್ತು. ಬಹುಶಃ ಸ್ವಾತಂತ್ರ್ಯ ಪೂರ್ವದಿಂದ ಬದುಕುತ್ತಿದ್ದ ನೆಲೆಯನ್ನು ಇಷ್ಟೊಂದು ಹಗುರವಾಗಿ ತೆಗೆದುಕೊಳ್ಳುವ ಕಾರ್ಯ ಮಾಡುತ್ತಿರಲಿಲ್ಲ. ಸ್ವಾಧೀನ ಮಾಡಿಕೊಳ್ಳುವ ಸಂದರ್ಭದಲ್ಲಿ ಅನುಸರಿಸಬೇಕಾದ ರೀತಿ ನೀತಿಗಳನ್ನು ಅನುಸರಿಸಿಲ್ಲ. ಸಂವಿಧಾನ ಬದ್ಧ ಕಾನೂನು ರಚನೆ, ಜನ ಸಾಮಾನ್ಯರಿಗೆ ಇರುವ ಕಾನೂನು ರಕ್ಷಣೆ ಇಷ್ಟೊಂದು ಲಘುವಾಗಿರುವುದಿಲ್ಲ. ದೇವಸ್ಥಾನವನ್ನು ಸ್ವಾಧೀನ ಪಡಿಸಿಕೊಳ್ಳುವಾಗ ನಮಗೆ ಅನ್ಯಾಯವಾಗಿದೆ, ನ್ಯಾಯಾಲಯಗಳಲ್ಲಿ ಪ್ರಕರಣಗಳಿವೆ. ಇವುಗಳ ಬಗ್ಗೆ ಕಾನೂನು ಸಲಹೆ ಪಡೆದು ನಮಗೆ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮೀನಾಕ್ಷಿ, ಪ್ರೇಮಾ, ಜಯಶೀಲಾ, ಶಾಂತಾ, ಗಾಯತ್ರಿ, ಲೀಲಾ, ಹೋರಾಟಗಾರ್ತಿ ದೇವಿರಮ್ಮ, ನಂಜುಂಡೇಗೌಡ, ಸಿದ್ದಪ್ಪ, ತಿಮ್ಮೇಗೌಡ, ಪಿ.ಹಳ್ಳಿ ರಮೇಶ್ ಇತರರಿದ್ದರು.