

ಹಳಿಯಾಳ: ತಾಲೂಕಿನ ಜನಗಾ ಗ್ರಾಮದ ಗಾಂವಠಾಣ ಜಾಗದಲ್ಲಿ ಅನಧಿಕೃತ ಶಡ್ ನಿರ್ಮಿಸಿ, ಆ ಸ್ಥಳದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಫೋಟೋವನ್ನು ಇಟ್ಟು ಅವರಿಗೆ ಅಗೌರವ ಸೂಚಿಸಿದ್ದು ಅಲ್ಲದೇ ಸುಳ್ಳು ಜಾತಿನಿಂದನೆ ಪ್ರಕರಣ ದಾಖಲಿಸಿ ಗ್ರಾಮಸ್ಥರಿಗೆ ಬೆದರಿಕೆ ಹಾಕುತ್ತ, ಊರ ಜನರಿಗೆ ತೊಂದರೆ ನೀಡುತ್ತಿದ್ದು ಇತನ ವಿರುದ್ದ ಕೂಡಲೇ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜನಗಾ ಗ್ರಾಮಸ್ಥರು ತಾಲೂಕಾ ಕೇಂದ್ರ ಹಳಿಯಾಳ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ ವಿದ್ಯಮಾನ ನಡೆಯಿತು.
ಪಟ್ಟಣದ ಬಸವೇಶ್ವರ ವೃತ್ತದ ಬಳಿ ಜನಗಾ ಗ್ರಾಮಸ್ಥರು ನೂರಾರು ಸಂಖ್ಯೆಯಲ್ಲಿ ಸೇರಿ ಪ್ರತಿಭಟನೆ ಆರಂಭಿಸಿದಾಗ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಕೆಲ ಮುಖಂಡರು ಮತ್ತು ದಲಿತ ಸಮುದಾಯದ ಪ್ರಮುಖರು ಜನಗಾ ಗ್ರಾಮಸ್ಥರ ಪ್ರತಿಭಟನೆಗೆ ಸಂಪೂರ್ಣ ಬೆಂಬಲ ಘೋಷಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ತಾಲೂಕಾ ಪಂಚಾಯತ ಪ್ರಭಾರಿ ಇಓ ಸತೀಶ್ ಆರ್ ಅವರಿಗೆ ಲಿಖಿತ ಮನವಿ ಸಲ್ಲಿಸಿದ ನಂತರ ನೇರವಾಗಿ ಪ್ರತಿಭಟನಾ ಮೆರವಣಿಗೆ ಮೂಲಕ ತಾಲೂಕಾ ಆಡಳಿತ ಸೌಧಕ್ಕೆ ಆಗಮಿಸಿ ತಹಶೀಲ್ದಾರ್ ಪ್ರವೀಣ ಹುಚ್ಚನ್ನವರ ಹಾಗೂ ಸಿಪಿಐ ಜಯಪಾಲ್ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.
ಮನವಿಯಲ್ಲಿ : - ತಾಲೂಕಿನ ಜನಗಾ ಗ್ರಾಮದ ಮಹಾಂತೇಶ್ ವಡ್ಡರ್ ಎಂಬ ವ್ಯಕ್ತಿಯು ಗ್ರಾಪಂ ಒಡೆತನದಲ್ಲಿರುವ ಸ್ಥಳದಲ್ಲಿ ಅನಧಿಕೃತ ಶೆಡ್ ನಿರ್ಮಾಣ ಮಾಡಿ, ಗ್ರಾಮಸ್ಥರಿಗೆ ಬೆದರಿಕೆ ಹಾಕುತ್ತ, ಊರ ಜನರಿಗೆ ತೊಂದರೆ ನೀಡುತ್ತಿದ್ದಾನೆ. ಮಾತ್ರವಲ್ಲದೇ ತಾಪಂ, ಗ್ರಾಪಂ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಬೆದರಿಕೆ ಹಾಕುತ್ತಾ, ಗ್ರಾಮದ ದಲಿತ ಸಮುದಾಯದ ನಾರಾಯಣ ದುರ್ಗಪ್ಪ ವಡ್ಡರ್ ಹಾಗೂ ಅವರ ಕುಟುಂಬದ ಮೇಲೆ ಹಲ್ಲೆ ಮಾಡಿದ್ದಾನೆ. ಅಲ್ಲದೆ ಇನ್ನಿತರ ಬೇರೆ ಸಮುದಾಯದ ಜನರ ಮೇಲೆ ಸುಳ್ಳು ದಲಿತ ದೌರ್ಜನ್ಯ ಪ್ರಕರಣಗಳನ್ನು ದಾಖಲಿಸುತ್ತಿದ್ದಾನೆ. ಇದರಿಂದಾಗಿ ಗ್ರಾಮದ ಅಶಾಂತಿಯ ವಾತಾವರಣ ನಿರ್ಮಾಣವಾಗಿದೆ.
ರೌಡಿ ಶಿಟರ್ ಬೆಂಬಲ ;-
ಅದೇ ರೀತಿ ಮಹಾಂತೇಶ್ ವಡ್ಡರ ಅವರಿಗೆ ರೌಡಿಶೀಟರ್ ಆಗಿರುವ ತಾಲೂಕಿನ ಕೃಷ್ಣಾ ಹುಲಸವಾರ ಕುಮ್ಮಕ್ಕು ನೀಡುತ್ತಾ ಗ್ರಾಮದ ಸೌಹಾರ್ದತೆಗೆ ಧಕ್ಕೆ ತಂದಿದ್ದಾರೆ. ಆದ್ದರಿಂದ ರೌಡಿ ಶಿಟರ್ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಅಲ್ಲದೇ ಅನಧಿಕೃತ ಶಡ್ ತೆರವುಗೊಳಿಸಬೇಕೆಂದು ಈ ಹಿಂದೆ ಸಂಬಂಧಪಟ್ಟ ಎಲ್ಲ ಇಲಾಖೆಯ ಅಧಿಕಾರಿಗಳಿಗೆ ಮನವಿಯನ್ನು ಸಹ ಸಲ್ಲಿಸಲಾಗಿದೆ. ಆದರೆ ಇಲ್ಲಿಯವರೆಗೂ ಯಾವುದೇ ಕ್ರಮವನ್ನು ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿರುವ ಅಧಿಕಾರಿಗಳ ಕಾರ್ಯವೈಖರಿ ಕುರಿತು ಗ್ರಾಮಸ್ಥರು ಅಸಮಾಧಾನ ಹೊರಹಾಕಿದ್ದಾರೆ.
ನಕಲಿ ಪತ್ರಕರ್ತರ ವಿರುದ್ದ ಕಿಡಿ :-
ಇನ್ನೂ ಕಾಣದ ಕೈಗಳು ಗ್ರಾಮದಲ್ಲಿ ಶಾಂತಿ ನೆಲೆಸಬಾರದು ಎಂಬ ಉದ್ದೇಶದಿಂದ ಮಹಾಂತೇಶ್ ವಡ್ಡರ್ ಎಂಬುವನಿಗೆ ಕುಮ್ಮಕ್ಕು ನೀಡುತ್ತಾ ಇದ್ದಾರೆ. ತಮ್ಮ ವೈಯುಕ್ತಿಕ ಹಿತಾಸಕ್ತಿಗೆ ಗ್ರಾಮದ ನೆಮ್ಮದಿಗೆ ಭಂಗ ತಂದಿರುವ ಇಂಥವರೊಂದಿಗೆ ಕೆಲವು ನಕಲಿ ಪತ್ರಕರ್ತರು ಬೆಂಬಲಕ್ಕೆ ನಿಂತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಲಾಗಿದ್ದು ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ.
ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಪ್ರವೀಣ ಹುಚ್ಚನ್ನವರ ಗ್ರಾಮಸ್ಥರ ಈ ಗಂಭೀರ ಸಮಸ್ಯೆ ಪರಿಹಾರಕ್ಕೆ ಶೀಘ್ರವೇ ತಾಲೂಕಾಡಳಿತದಿಂದ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಮತ್ತು ಸಂಬಂಧಪಟ್ಟ ಇಲಾಖೆಗೆ ಸೂಚನೆ ನೀಡಿ ಸಮಸ್ಯೆಯನ್ನು ಇತ್ಯರ್ಥ ಪಡಿಸುವಂತೆ ಸೂಚಿಸಲಾಗುವುದು.
ಗ್ರಾಮದಲ್ಲಿ ನಡೆದಿರುವ ಇಂತಹ ಘಟನೆ ಕುರಿತು ಮೇಲಾಧಿಕಾರಿಗಳಿಗೆ ಸಂಪೂರ್ಣ ವರದಿ ಸಲ್ಲಿಸಲಾಗುವುದು ಅಲ್ಲದೇ ಗ್ರಾಮದ ಸಾರ್ವಜನಿಕರ ರಕ್ಷಣೆಗೆ ತಾಲೂಕಾಡಳಿತ ಬದ್ದವಾಗಿದೆ ಎಂದು ಭರವಸೆ ನೀಡಿದ ಬಳಿಕ ಗ್ರಾಮಸ್ಥರು ಪ್ರತಿಭಟನೆಯನ್ನು ಹಿಂಪಡೆದರು.
ಪ್ರತಿಭಟನೆಯಲ್ಲಿ ಜನಗಾ ಗ್ರಾ.ಪಂ ಉಪಾಧ್ಯಕ್ಷೆ ಭೀಮಾ ಕಮ್ಮಾರ, ಗ್ರಾಮದ ಪ್ರಮುಖರಾದ ಸುಭಾಸ ಕೊಲಕಾರ, ಕಸ್ತೂರಿ ವಡ್ಡರ, ಜಯಾ ಅಲ್ಲಾಕುಟಿಕರ್, ಹನುಮಂತ ಚಿನಗಿನಕೊಪ್ಪಕೃಷ್ಣ ಕರ್ಲಕೊಪ್ಪ, ತುಕಾರಾಮ ಠೋಸುರ, ಪುಂಡ್ಲಿಕ್ ಗೌಡಾ, ತುಕಾರಾಮ ಮಡಿವಾಳ, ಗೋವಿಂದ ಕಂಡೇಕರ, ರವಿ ಹರಿಜನ, ಸಂತೋಷ ಘಟಕಾಂಬಳೆ, ಉಮೇಶ್ ಬೊಳಶೆಟ್ಟಿ, ನಾಗೇಂದ್ರ ಜಿಯೋಜಿ, ಚಂದ್ರಕಾಂತ್ ಕಲಬಾವಿ, ಸುಭಾನಿ ಹುಬ್ಬಳ್ಳಿ, ವಿಲಾಸ್ ಗಣಗಲಿ ಇತರರಿದ್ದರು.