ಮುಂಡರಗಿಯ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರಿಂದ ಪ್ರತಿಭಟನೆ

MDG
Published on

ಮುಂಡರಗಿ: ತಾಲೂಕಿನ 19 ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಪೂರ್ಣಗೊಂಡ ಕಾಮಗಾರಿಗಳಿಗೆ ಬಳಸಿರುವ ಸಾಮಗ್ರಿಗಳ ಮೊತ್ತವನ್ನು ಪಾವತಿ ಮಾಡಬೇಕು ಎಂದು ಒತ್ತಾಯಿಸಿ ತಾಲೂಕಿನ ವಿವಿಧ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಮಂಗಳವಾರ ಪ್ರತಿಭಟನೆ ನಡೆಸಿದರು.
ತಾಲೂಕಿನ ಗ್ರಾಪಂ ಸದಸ್ಯರ ಒಕ್ಕೂಟದ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ತಾಲೂಕಿನ 19 ಗ್ರಾಪಂಗಳಿಗೆ ನರೇಗಾ ಅನುದಾನ ಬಿಡುಗಡೆಯಾಗಿಲ್ಲ. ಇದರಿಂದ ಅಭಿವೃದ್ಧಿ ಕುಂಠಿತವಾಗಿದೆ. ನರೇಗಾ ಯೋಜನೆಯಡಿ ಈಗಾಗಲೇ ಪೂರ್ಣಗೊಳಿಸಿರುವ ಕಾಮಗಾರಿಗಳ ಮೊತ್ತ 15 ತಿಂಗಳ ಕಳೆದರೂ ಬಿಡುಗಡೆ ಮಾಡಿಲ್ಲ. ಕಾಮಗಾರಿ ಮಾಡಿದ ಗುತ್ತಿಗೆದಾರರು ಗ್ರಾಪಂಗೆ ಬಂದು ಸಾಮಗ್ರಿ ಮೊತ್ತವನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸುತ್ತಿದ್ದಾರೆ.
ದನದ ಶೆಡ್ಡು, ಕುರಿ ಶೆಡ್ಡು, ಎರೆಹುಳು ತೊಟ್ಟೆ, ಕೃಷಿಹೊಂಡ ನಿರ್ಮಾಣ, ತೆಂಗಿನ ತೋಟ ಹಾಗೂ ಇನ್ನಿತರ ಕಾಮಗಾರಿಗಳಿಗೆ ಪ್ರಸ್ತುತ ಸಾಮಗ್ರಿ ಪೂರೈಕೆಯಾಗದ ಕಾರಣ ಫಲಾನುಭವಿಗಳು ಗ್ರಾಪಂಗೆ ಬಂದು ಸದಸ್ಯರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. 2 ವರ್ಷಗಳಿಂದ ಆಶ್ರಯ ಮನೆಗಳು ಮಂಜೂರಾಗಿಲ್ಲ. 15ನೇ ಹಣಕಾಸು ಯೋಜನೆಯಲ್ಲಿ ಗ್ರಾಪಂಗಳಿಗೆ ಅನುದಾನ ಬಂದಿಲ್ಲ ಎಂದು ದೂರಿದರು.
ನರೇಗಾ ಯೋಜನೆಯಲ್ಲಿ 5 ಲಕ್ಷ ಮೇಲ್ಪಟ್ಟ ಸಾಮಗ್ರಿ ಮೊತ್ತವನ್ನು ಟೆಂಡರ್ ಮೂಲಕ ಆದೇಶ ಮಾಡಿರುವುದರಿಂದ ಅಭಿವೃದ್ಧಿ ಕಾರ್ಯ ಮಾಡಲು ತೊಂದರೆಯಾಗಲಿದೆ. ಈ ಆದೇಶ ರದ್ದುಗೊಳಸಬೇಕು ಎಂದು ಒತ್ತಾಯಿಸಿದರು.
ಜಿಪಂ ಸಹಾಯಕ ನಿರ್ದೇಶಕ ಎಸ್.ಕೆ. ಇನಾಮದಾರ ಸ್ಥಳಕ್ಕೆ ಭೇಟಿ ನೀಡಿ, ವರದಿ ಸರ್ಕಾರಕ್ಕೆ ಕಳುಹಿಸಲಾಗಿದೆ. ಅನುದಾನ ಬಿಡುಗಡೆಯಾದ ತಕ್ಷಣ ನೀಡಲಾಗುವುದು ಎಂದು ಭರವಸೆ ನೀಡಿದರು. ಇನ್ನೆರಡು ದಿನಗಳಲ್ಲಿ ಅನುದಾನ ಬಿಡುಗಡೆಯಾಗದಿದ್ದರೆ ಸೆ.8ರಂದು ತಾಪಂಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿ ಪ್ರತಿಭಟನೆ ಹಿಂಪಡೆಯಲಾಯಿತು.
ಗ್ರಾಪಂ ಸದಸ್ಯರ ಒಕ್ಕೂಟದ ಗೌರವಾಧ್ಯಕ್ಷ ಮಲ್ಲಿಕಾರ್ಜುನ ಹಣಜಿ, ಅಧ್ಯಕ್ಷ ಯಲ್ಲಪ್ಪಗೌಡ ಕರಮುಡಿ, ಉಪಾಧ್ಯಕ್ಷ ರವಿಚಂದ್ರ ಬಂಡಿವಡ್ಡರ, ಕಾರ್ಯದರ್ಶಿ ಅಮರೇಶ ಹಿರೇಮಠ, ಬೀಡನಾಳ ಗ್ರಾಪಂ ಅಧ್ಯಕ್ಷ ಕೊಪ್ಪಣ್ಣ ಕೊಪ್ಪಣ್ಣವರ, ಹಮ್ಮಿಗಿ ಗ್ರಾಪಂ ಅಧ್ಯಕ್ಷ ಅಬ್ಬಾಸಾಹೇಬ್ ದೇಸಾಯಿ, ಅಂದಪ್ಪ ಮಕರಬ್ಬಿ, ಎಸ್.ಬಿ. ಉದಂಡಿ, ಪರಮೇಶ ಗೋಣೆಣ್ಣನವರ, ಸಂಗನಗೌಡ ಪಾಟೀಲ, ಪರ್ವತ್‌ಗೌಡ ಪಾಟೀಲ, ನಾಗರಾಜ ಸಾಳಂಕಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net