ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಆಡಳಿತ ಅಧಿಕಾರಿಗಳಿಂದ ಪ್ರತಿಭಟನೆ

15
Published on

ಮೈಸೂರು: ಗ್ರಾಮ ಆಡಳಿತ ಅಧಿಕಾರಿಗಳ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘದಿಂದ ಸೋಮವಾರದಿಂದ ಹಮ್ಮಿಕೊಂಡಿರುವ ಮುಷ್ಕರ ನಗರದಲ್ಲಿ ಮಂಗಳವಾರವೂ ಮುಂದುವರಿದಿದೆ.

ತಾಲೂಕು ಕಚೇರಿ ಬಳಿ ಧರಣಿ ನಡೆಸಿದ ಸಿಬ್ಬಂದಿ, ಈ ಹಿಂದೆ ಮುಷ್ಕರ ಹಮ್ಮಿಕೊಂಡಿದ್ದ ಸಂದರ್ಭದಲ್ಲಿ ಸರ್ಕಾರದ ಮುಂದಿಟ್ಟಿದ್ದ ಗ್ರಾಮ ಆಡಳಿತ ಅಧಿಕಾರಿಗಳ ಯಾವುದೇ ಬೇಡಿಕೆಗಳನ್ನು ಸರ್ಕಾರ ಇದುವರೆಗೂ ಈಡೇರಿಸಿಲ್ಲ. ಹಾಗಾಗಿ ಈಗ ರಾಜ್ಯ ವ್ಯಾಪಿ ಎರಡನೇ ಹಂತದ ಮುಷ್ಕರಕ್ಕೆ ಕರೆ ನೀಡಲಾಗಿದ್ದು, ಕರ್ತವ್ಯ ಬಹಿಷ್ಕರಿಸಲಾಗಿದೆ ಎಂದು ಹೇಳಿದರು.

ನಮ್ಮ ಪ್ರಮುಖ ಬೇಡಿಕೆಗಳಾದ ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಯನ್ನು ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿ ನಿಗದಿಪಡಿಸಿ ಆದೇಶ ಹೊರಡಿಸಬೇಕು. ಅಧಿಕಾರಿಗಳಿಗೆ ಸುಸಜ್ಜಿತ ಕಚೇರಿ ಕಲ್ಪಿಸಬೇಕು. ಇತರ ಇಲಾಖೆಗಳಲ್ಲಿ ಇರುವಂತೆ ಕಂದಾಯ ಇಲಾಖೆಯಲ್ಲಿ ವರ್ಗಾವಣೆಗೆ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಕಂದಾಯ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಎಲ್ಲ ವೃಂದಗಳನ್ನು ಒಳಗೊಂಡಂತೆ ನೀಡುತ್ತಿರುವ ಅನುಕಂಪದ ನೇಮಕಾತಿ ಹುದ್ದೆಯ ತಿದ್ದುಪಡಿ ಮಾಡಬೇಕು. ಕ್ಷೇತ್ರ ಮಟ್ಟದಲ್ಲಿ ಕರ್ತವ್ಯ ನಿರ್ವಹಿಸುವಾಗ ಜೀವ ಹಾನಿಯಾಗುವ ಗ್ರಾಮ ಆಡಳಿತ ಅಧಿಕಾರಿಗಳ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ಮಂಜೂರು ಮಾಡಬೇಕು. ಪ್ರಯಾಣ ಭತ್ಯೆ ಮತ್ತು ಆಪತ್ತಿನ ಭತ್ಯೆ ಹೆಚ್ಚಿಸಬೇಕು. ಪ್ರಮುಖ ಬೇಡಿಕೆ ಈಡೇರಿಸುವವರೆಗೂ ನಮ್ಮ ಮುಷ್ಕರ ಮುಂದುವರೆಸುವಾಗಿ ಹೇಳಿದರು.

ಸಂಘದ ಜಿಲ್ಲಾಧ್ಯಕ್ಷ ನಾಗೇಶ್, ತಾಲೂಕು ಅಧ್ಯಕ್ಷ ಭಾಸ್ಕರ್, ಪದಾಧಿಕಾರಿಗಳಾದ ಮಹೇಶ್, ಜಗದೀಶ್, ಉಮಾ ಮಹೇಶ್ವರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net