ವಿಹಿಂಪ, ಬಜರಂಗ ದಳದಿಂದ ಪ್ರತಿಭಟನೆ

Protest by Vhp, Bajrang Dal
Published on

ರಟ್ಟಿಹಳ್ಳಿ: ರೈತರ ಜಮೀನು, ಮಠ, ಮಂದಿರಗಳು, ದೇವಸ್ಥಾನಗಳು, ಹಿಂದು ಸಮಾಜದ ರುದ್ರಭೂಮಿ ಸೇರಿದಂತೆ ಸರ್ಕಾರದ ಆಸ್ತಿಗಳ ಪಹಣಿಯ ಕಾಲಂ 11ರಲ್ಲಿ ವಕ್ಪ್ ಆಸ್ತಿ ಎಂದು ನಮೂದು ಮಾಡಿರುವುದನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ವಿಶ್ವ ಹಿಂದು ಪರಿಷತ್, ಬಜರಂಗ ದಳದ ವತಿಯಿಂದ ಪಟ್ಟಣದಲ್ಲಿ ಸೋಮವಾರ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿ, ಬಳಿಕ ತಹಸೀಲ್ದಾರ್ ಕೆ. ಗುರುಬಸವರಾಜ ಅವರಿಗೆ ಮನವಿ ಸಲ್ಲಿಸಲಾಯಿತು.

ಬಜರಂಗ ದಳದ ತಾಲೂಕು ಸಂಯೋಜಕ ನವೀನ ಮಾದರ ಮತ್ತು ಸೇವಾ ಪ್ರಮುಖ ಆಕಶಗೌಡ ಪಾಟೀಲ ಮಾತನಾಡಿ, ನಮ್ಮ ಆಸ್ತಿ ಮೇಲೆ ಕಣ್ಣು ಹಾಕಿದರೆ ಸುಮ್ಮನೆ ಕೂರುವದಿಲ್ಲ. ಸಾವಿರಾರು ಬಡ ಮಕ್ಕಳಿಗೆ ವಿದ್ಯಾದಾನ, ಅನ್ನದಾಸೋಹ ಮಾಡುವ ಮಠ ಮಂದಿರಗಳ ಮೇಲೆ ಸರ್ಕಾರ ಕಣ್ಣು ಬಿದ್ದಿರುವುದು ನಾಚಿಕೆಗೇಡಿನ ಸಂಗತಿ. ವಕ್ಪ್ ಹೆಸರಿನಲ್ಲಿ ಹಿಂದುಗಳ ಆಸ್ತಿಯನ್ನು ಅಕ್ರಮವಾಗಿ ಕಬಳಿಸುವ ಹುನ್ನಾರ ನಡೆದಿದೆ. ಲವ್ ಜಿಹಾದ್​ನಂತೆ ಲ್ಯಾಂಡ್ ಜಿಹಾದ್ ಮಾಡುತ್ತಿರುವ ಈ ನಡೆಯನ್ನು ಬಜರಂಗದಳ ಉಗ್ರವಾಗಿ ವಿರೋಧಿಸುತ್ತದೆ ಎಂದರು.

ಸಚಿವ ಜಮೀರ್ ಅಹ್ಮದ್ ಅವರನ್ನು ಕೂಡಲೇ ಮಂತ್ರಿ ಮಂಡಲದಿಂದ ವಜಾ ಮಾಡಿ, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ವಕ್ಪ್ ಹೆಸರಿನಲ್ಲಿ ಅಕ್ರಮವಾಗಿ ನಮೂದಿಸಿರುವ ಎಲ್ಲ ಆಸ್ತಿಗಳನ್ನು ಮರಳಿ ಸಂಬಂಧಪಟ್ಟ ಆಸ್ತಿ ಮಾಲೀಕರ ಹೆಸರಿಗೆ ಮಾಡಬೇಕು ಎಂದು ಒತ್ತಾಯಿಸಿದರು.

ಬಸವನಾಳಮಠ, ಪಾಂಡುರಂಗ, ಬೀರೇಶ ಹೊಳಜೋಗಿ, ಆಕಾಶ ಮಾದರ, ದರ್ಶನ ಗೊಬ್ಬೂರು, ವಿವೇಕ ಕುಲ್ಕರ್ಣಿ, ಪ್ರಶಾಂತ ದ್ಯಾವಕ್ಕಳವರ, ಸುಶೀಲ ನಾಡಗೇರ, ಶಿವಣ್ಣ ಹರವಿಶೆಟ್ಟರ್, ಮನೋಜ ಗೋಣೆಪ್ಪನವರ,ಬಸವರಾಜ ಗೊಬ್ಬೂರು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net