

ಬೇಲೂರು: ತಾಲೂಕಿನ ವೀರದೇವನಹಳ್ಳಿಯ ಶ್ರೀ ಕರಿಮಲ್ಲೇಶ್ವರಸ್ವಾಮಿ ದೇಗುಲದ ಸಮೀಪ ಕಲ್ಲು ಗಣಿಗಾರಿಕೆಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಿ ವೀರದೇವನಹಳ್ಳಿ ಗ್ರಾಮದ ಶ್ರೀ ಕರಿಮಲ್ಲೇಶ್ವರಸ್ವಾಮಿ ದೇವರ ಭಕ್ತರು ಹಾಗೂ ಗ್ರಾಮಸ್ಥರು ಗ್ರಾಮದ ಸಮೀಪ ಸೋಮವಾರ ಪ್ರತಿಭಟನೆ ನಡೆಸಿದರು.
ಶ್ರೀ ಕರಿಮಲ್ಲೇಶ್ವರಸ್ವಾಮಿ ದೇಗುಲ ಸಮಿತಿ ಮುಖ್ಯಸ್ಥ ಚಂದ್ರೇಗೌಡ ಮಾತನಾಡಿ, ಶ್ರೀ ಕರಿಮಲ್ಲೇಶ್ವರ ದೇಗುಲಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಡಿದೆ. ಇಂತಹ ದೇಗುಲದ ಸುತ್ತಲಿನ ಚನ್ನೇಹಳ್ಳಿ ಗ್ರಾಮದ ಸರ್ವೇ ನಂ. 20 ರಲ್ಲಿ ರಾಜಕೀಯ ಪ್ರಭಾವ ಬಳಸಿ ಗಣಿಗಾರಿಕೆ ನಡೆಸಲು ಕೆಲವರು ಮುಂದಾಗಿದ್ದಾರೆ. ಈಗಾಗಲೇ ಶ್ರೀ ಕರಿಮಲ್ಲೇಶ್ವರ ದೇಗುಲ ಜೀರ್ಣೋದ್ಧಾರಗೊಳಿಸುವ ಮೂಲಕ ಪ್ರತಿನಿತ್ಯ ಪೂಜೆ ನಡೆಸಲಾಗುತ್ತಿದೆ. ಹಣ್ಣಿಮೆ-ಅಮವಾಸ್ಯೆಯಂದು ಕಾರ್ಯಕ್ರಮಗಳು ನಡೆಯುತ್ತಿರುವ ಧಾರ್ಮಿಕ ಸ್ಥಳ ಉಳಿಸುವುದು ಎಲ್ಲರ ಕರ್ತವ್ಯವಾಗಿದೆ. ಈಗಾಗಲೇ ಶಾಸಕ ಎಚ್.ಕೆ.ಸುರೇಶ್ ಗಮನಕ್ಕೂ ತಂದು, ಜಿಲ್ಲಾಧಿಕಾರಿ, ತಹಸೀಲ್ದಾರ್‌ಗೆ ದೂರು ನೀಡಲಾಗಿದೆ. ಜಿಲ್ಲಾಧಿಕಾರಿಗಳು ಗಣಿಗಾರಿಕೆಗೆ ಅನುಮತಿ ನೀಡುವುದಿಲ್ಲ ಎಂದು ತಿಳಿಸಿದ್ದಾರೆ. ಗ್ರಾಮಸ್ಥರ ಅನುಕೂಲಕ್ಕಾಗಿ ದೇಗುಲ ಉಳಿಸಲು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಬೇಕು ಎಂದರು.
ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಸಿದ್ದೇಗೌಡ ಮಾತನಾಡಿ, ವೀರದೇವನಹಳ್ಳಿ ಗ್ರಾಮಕ್ಕೆ ಹೊಯ್ಸಳರ ಕಾಲದಲ್ಲಿ 900 ವರ್ಷಗಳ ಹಿಂದೆ ಇದೇ ಬಂಡೆಯಲ್ಲಿ ಶ್ರೀ ಚನ್ನಕೇಶವಸ್ವಾಮಿ ದೇಗುಲದ ಶಿಲ್ಪಗಳು ಮತ್ತು ದೇವರ ಮೂರ್ತಿ ತಯಾರಿಕೆಗೆ ಇಲ್ಲಿಂದಲೇ ಕಲ್ಲುಗಳನ್ನು ತೆಗೆದುಕೊಂಡು ಹೋದ ಬಗ್ಗೆ ಇತಿಹಾಸವಿದೆ. ಈಗಲೂ 100 ಅಡಿಯ ಚನ್ನೇದೇವರ ಗುಂಡಿ ಎಂಬ ಹೆಸರಿದೆ. ಇಲ್ಲಿನ ದೇಗುಲವನ್ನು ಗ್ರಾಮಸ್ಥರು ಅಭಿವೃದ್ಧಿಪಡಿಸಿ ನಿತ್ಯ ದಾಸೋಹ ವ್ಯವಸ್ಥೆ ಮಾಡಲಾಗುತ್ತಿದೆ. ಅಲ್ಲದೆ ದೇಗುಲದ ರಸ್ತೆಯನ್ನು ಮಾಡಿಸಲಾಗಿದೆ. ಆದರೂ ಕೆಲವರು ಗಣಿಗಾರಿಕೆಗಾಗಿ ರಾಜಕೀಯ ಪ್ರಭಾವ ಬಳಸುತ್ತಿರುವುದು ಕಂಡುಬರುತ್ತಿದೆ. ಯಾವುದೇ ಕಾರಣಕ್ಕೂ ಇಲ್ಲಿ ಗಣಿಗಾರಿಕೆಗೆ ಅವಕಾಶ ಕೊಡಬಾರದು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ರಮೇಶಯ್ಯ, ಹಲಗೇಗೌಡ, ಶಿವೇಗೌಡ, ಹಾಲಪ್ಪ, ಶಿವಲಿಂಗಪ್ಪ, ಮೂರ್ತಿ, ಹೇಮಾಕುಮಾರ್, ಜಯರುದ್ರೇಗೌಡ, ದಯಾನಂದ, ಬಸವೇಗೌಡ, ಈಶ್ವರೇಗೌಡ, ಶಾಂತಮಲ್ಲೇಗೌಡ. ಜಯಪ್ಪಗೌಡ ವೇದಮೂರ್ತಿ ಇತರರಿದ್ದರು.