

ಮಂಡ್ಯ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ನಿಂದಿಸಿರುವ ಕೇಂದ್ರ ಸಚಿವ ಅಮಿತ್ ಷಾ ಹಾಗೂ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಅವಮಾನಿಸಿರುವ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿಯನ್ನು ಅವರ ಸ್ಥಾನದಿಂದ ವಜಾಗೊಳಿಸುಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಹಾಗೂ ಕರ್ನಾಟಕ ಜನಶಕ್ತಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಜೆ.ಸಿ.ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ಇಬ್ಬರ ಪ್ರತಿಕೃತಿ ದಹನ ಮಾಡಿದರಲ್ಲದೆ, ಬೆಂಗಳೂರು-ಮೈಸೂರು ಹೆದ್ದಾರಿ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಅಂಬೇಡ್ಕರ್ ಪ್ರತಿಮೆ ಮುಂದೆ ಅಮಿತ್ ಷಾ ಮಂಡಿಯೂರಿ ಕುಳಿತು ದೇಶದ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ಪ್ರಬಲವಾಗಿ ಪ್ರತಿಪಾದಿಸಿ ಕಟ್ಟಿಕೊಟ್ಟ ಸಂಸದೀಯ ಪ್ರಜಾಪ್ರಭುತ್ವದ ಅತ್ಯುನ್ನುತ ವೇದಿಕೆಯಾದ ಸಂಸತ್‌ನಲ್ಲಿ ಅಮಿತ್ ಷಾ, ಸಂವಿಧಾನ ಕುರಿತ ಚರ್ಚೆಯ ಸಂದರ್ಭದಲ್ಲಿ ಅಂಬೇಡ್ಕರ್ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ಈ ಮೂಲಕ ತನ್ನ ಹಾಗೂ ಸಂಘ ಪರಿವಾರದ ತೀವ್ರ ಅಸಹನೆ, ದ್ವೇಷ ಹೊರ ಹಾಕಿದ್ದಾರೆ ಎಂದು ಖಂಡಿಸಿದರು.
ಪ್ರತಿಭಟನೆಯಲ್ಲಿ ಪ್ರೊ.ಹುಲ್ಕೆರೆ ಮಹದೇವು, ದಸಂಸ ರಾಜಶೇರ್, ಜಾಗೃತ ಕರ್ನಾಟಕದ ಎನ್.ನಾಗೇಶ್, ಸುಬ್ರಮಣ್ಯ, ಕರ್ನಾಟಕ ಜನಶಕ್ತಿಯ ಸಿದ್ದರಾಜು, ವಕೀಲ ಜೆ.ರಾಮಯ್ಯ, ಮಹಿಳಾ ಮುನ್ನಡೆಯ ಶಿಲ್ಪಾ, ಕರ್ನಾಟಕ ಶ್ರಮಿಕ ಶಕ್ತಿ ರಾಜ್ಯಾಧ್ಯಕ್ಷ ವರದರಾಜೇಂದ್ರ, ಅರುಣೋದಯ ಕಲಾತಂಡದ ಮಂಜುಳಾ ಇತರರಿದ್ದರು.
ಎಸ್ಪಿಗೆ ಮನವಿ: ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಲಘುವಾಗಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು. ಜೆ.ಸಿ.ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ಬೆಂಗಳೂರು-ಮೈಸೂರು ಹೆದ್ದಾರಿ ಮಾರ್ಗವಾಗಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಮನವಿ ಸಲ್ಲಿಸಿದರು.
ರಾಜ್ಯ ಉಪಾಧ್ಯಕ್ಷ ವೆಂಕಟಗಿರಿಯಯ್ಯ, ರಾಜ್ಯ ಕಾರ್ಯದರ್ಶಿ ಶಿವಕುಮಾರ್, ಜಿಲ್ಲಾಧ್ಯಕ್ಷ ಕೆ.ಎಂ.ಅನಿಲ್‌ಕುಮಾರ್, ಉಪಾಧ್ಯಕ್ಷ ಆನಂದ್, ಮುಖಂಡರಾದ ಎಸ್.ಆನಂದ್, ಧನಂಜಯ್ ಭಾಗವಹಿಸಿದ್ದರು.