

ವಿಜಯವಾಣಿ ಸುದ್ದಿಜಾಲ ಧಾರವಾಡ
ಶೈಕ್ಷಣಿಕ ಸಹಾಯಧನ ಕಡಿತ ಆದೇಶ ವಾಪಸ್ ಪಡೆಯುವುದು, ಮೊದಲು ಇದ್ದಂತೆ 3 ವರ್ಷಗಳಿಗೊಮ್ಮೆ ಕಾರ್ಮಿಕರ ಕಾರ್ಡ್ಗಳ ನವೀಕರಣ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶ್ರೀ ಸಾಯಿ ಕಾರ್ಮಿಕ ಸೇವಾ ಕೇಂದ್ರ ಮತ್ತು ಕರ್ನಾಟಕ ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಒಕ್ಕೂಟದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಲಾಯಿತು.
ಹೈಕೋರ್ಟ್ ಆದೇಶದಂತೆ ಕಾರ್ಮಿಕರ ಮಕ್ಕಳಿಗೆ 2022ರಿಂದ 2024ರವರೆಗಿನ ಶೈಕ್ಷಣಿಕ ಸಹಾಯಧನ ಬಿಡುಗಡೆ ಮಾಡಬೇಕು. ಪಿಂಚಣಿ ಅರ್ಜಿ ಸಲ್ಲಿಕೆಗೆ ನಿರ್ಬಂಧ ವಿಧಿಸಬಾರದು. ಕಟ್ಟಡ ಕಾರ್ಮಿಕರಿಗೆ ರಾಜ್ಯ ಕಾರ್ಮಿಕ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡಬೇಕು. ಹೊಸ ತಂತ್ರಾ0ಶದಲ್ಲಿನ ತಾಂತ್ರಿಕ ತೊಂದರೆಗಳು ಮತ್ತು ಸರ್ವರ್ ಸಮಸ್ಯೆಯನ್ನು ನಿವಾರಿಸಬೇಕು. ನೈಜ ಕಾರ್ಮಿಕರ ನೋಂದಣಿ ಮತ್ತು ಮರು ನೋಂದಣಿ ಅರ್ಜಿಗಳ ವಿಲೇವಾರಿಯಲ್ಲಿ ವಿಳಂಬ ಮಾಡಬಾರದು. ವಿಜಯಪುರದಲ್ಲಿ ಕಾರ್ಮಿಕರ ಮೇಲೆ ಹಲ್ಲೆ ಮಾಡಿದವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ರವಾನಿಸಲಾಯಿತು.
ಶಿವಕುಮಾರ ಬಂಡಿವಡ್ಡರ, ಜ್ಯೋತಿ ಪತ್ತಾರ, ದುರ್ಗಪ್ಪ ಚಿಕ್ಕತುಂಬಳ, ವಾಸು ಲಮಾಣಿ, ನಬೀರಸುಲ ನದಾಫ, ಮುಸ್ತಾಕ ನದಾಫ, ಲಕ್ಷ÷್ಮಣ ಗಡಾರದ, ಶಿವಾನಂದ ಅಸೂಟಿ, ವಿನೋದ ಪಾಟೀಲ, ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.