ಗ್ರಾಪಂ ಸದಸ್ಯರ ಒಕ್ಕೂಟದಿಂದ ಪ್ರತಿಭಟನೆ

8MDG5 PRATIBHATANE
Published on

ಮುಂಡರಗಿ: ತಾಲೂಕಿನ 19 ಗ್ರಾಮ ಪಂಚಾಯಿತಿ ವ್ಯಾಪ್ತಿ ನರೇಗಾ ಯೋಜನೆಯಡಿ ಮಾಡಿರುವ ಕಾಮಗಾರಿ ಸಾಮಗ್ರಿಗಳ ಮೊತ್ತ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ತಾಲೂಕಿನ ಗ್ರಾಪಂ ಸದಸ್ಯರ ಒಕ್ಕೂಟದ ನೇತೃತ್ವದಲ್ಲಿ ತಾಲೂಕಿನ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಶುಕ್ರವಾರ ಪ್ರತಿಭಟನೆ ನಡೆಸಿದರು.

ನರೇಗಾ ಯೋಜನೆಯಡಿ ಕೈಗೊಂಡ ಕಾಮಗಾರಿಗಳ ಸಾಮಗ್ರಿಗಳ ಮೊತ್ತ ಬಿಡುಗಡೆ ಮಾಡುವಂತೆ ಇತ್ತೀಚೆಗೆ ಪ್ರತಿಭಟನೆ ನಡೆಸಲಾಗಿತ್ತು. ಎರಡು ದಿನ ಕಾಲಾವಕಾಶ ನೀಡಲಾಗಿತ್ತು. ಬೇಡಿಕೆಗೆ ಸ್ಪಂದಿಸದ ಕಾರಣ ಮತ್ತೆ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಪ್ರತಿಭಟನೆಕಾರರು ತಿಳಿಸಿದರು.

ತಾಲೂಕಿನ ಗ್ರಾಪಂ ಸದಸ್ಯರ ಒಕ್ಕೂಟದ ಗೌರವಾಧ್ಯಕ್ಷ ಮಲ್ಲಿಕಾರ್ಜುನ ಹಣಜಿ ಮಾತನಾಡಿ, 2022-23ನೇ ಸಾಲಿನಲ್ಲಿ 3.32 ಕೋಟಿ ರೂ. ಹಾಗೂ 2023-24ನೇ ಸಾಲಿನಲ್ಲಿ 3.81 ಕೋಟಿ ರೂ. ನರೇಗಾ ಯೋಜನೆಯಡಿ ಮಾಡಿರುವ ಕಾಮಗಾರಿಗಳ ಸಾಮಗ್ರಿಗಳ ಮೊತ್ತ ಬಾಕಿ ಇದೆ. ಒಂದೂವರೆ ವರ್ಷಗಳಿಂದ ಅನುದಾನ ಬಿಡುಗಡೆಯಾಗಿಲ್ಲ. ತಕ್ಷಣ ಅಧಿಕಾರಿಗಳು ಸ್ಪಂದಿಸಬೇಕು. ಇಲ್ಲದಿದ್ದರೆ ಒಕ್ಕೂಟದಿಂದ ನಿರ್ಣಯ ಕೈಗೊಂಡು ಮುಂದಿನ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.

ಅಧ್ಯಕ್ಷ ಯಲ್ಲಪ್ಪಗೌಡ ಕರಮುಡಿ, ಕಾರ್ಯದರ್ಶಿ ಅಮರೇಶ ಹಿರೇಮಠ ಮಾತನಾಡಿದರು. ಪ್ರತಿಭಟನೆ ಸ್ಥಳಕ್ಕೆ ಜಿಪಂ ಯೋಜನಾ ನಿರ್ದೇಶಕ ಎಂ.ವಿ. ಚಳ್ಳಿಗೇರಿ, ಜಿಪಂ ಸಹಾಯಕ ಕಾರ್ಯದರ್ಶಿ ಎಸ್.ಎಸ್. ಕಲ್ಮನಿ, ತಾಪಂ ಇಒ ವಿಶ್ವನಾಥ ಹೊಸಮನಿ ಅವರು ಭೇಟಿ ನೀಡಿ ಪ್ರತಿಭಟನೆಕಾರರೊಂದಿಗೆ ರ್ಚಚಿಸಿದರು. ಸೆ. 15ರೊಳಗೆ ನರೇಗಾ ಯೋಜನೆಯಡಿ ಪೂರ್ಣಗೊಂಡ ಕಾಮಗಾರಿಗಳ ಸಾಮಗ್ರಿಗಳ ಮೊತ್ತ ಬಿಡುಗಡೆ ಮಾಡಿಸಲಾಗುತ್ತದೆ ಎಂದರು. ಒಕ್ಕೂಟದ ಅಧ್ಯಕ್ಷ ಯಲ್ಲಪ್ಪಗೌಡ ಕರಮುಡಿ ಅವರು, ಸೆ. 18ರವರೆಗೆ ಕಾಲಾವಕಾಶ ನೀಡುತ್ತೇವೆ. ಅಷ್ಟರೊಳಗೆ ಸಾಮಗ್ರಿಗಳ ಮೊತ್ತ ಬಿಡುಗಡೆ ಮಾಡದಿದ್ದರೆ ಸಾಮೂಹಿಕವಾಗಿ ರಾಜೀನಾಮೆ ನೀಡಿ ತಾಪಂ ಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿ ಪ್ರತಿಭಟನೆ ಹಿಂಪಡೆದರು.

ಬೀಡನಾಳ ಗ್ರಾಪಂ ಅಧ್ಯಕ್ಷ ಕೊಪ್ಪಣ್ಣ ಕೊಪ್ಪಣ್ಣವರ, ಹಮ್ಮಿಗಿ ಗ್ರಾಪಂ ಅಧ್ಯಕ್ಷ ಅಪ್ಪಾಸಾಹೇಬ ದೇಸಾಯಿ, ಪರಮೇಶ ಗೋಣೆಣ್ಣನವರ, ಸಂಗನಗೌಡ ಪಾಟೀಲ, ಕುಮಾರ ಶಿದ್ಲೇಕೊಪ್ಪ, ಗುರಪ್ಪ ರೋಣದ, ರವೀಂದ್ರ ಜವಿ, ವೆಂಕಟೇಶ ಗೆಜ್ಜಿ, ಎಸ್.ಬಿ. ಉದಂಡಿ, ಗಣೇಶ ಭರಮಕ್ಕನವರ, ನಾಗರಾಜ ಸಾಳಂಕಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net