

ವಿಜಯವಾಣಿ ಸುದ್ದಿಜಾಲ ಉಡುಪಿ
ಬ್ಯಾಂಕ್ಗಳಲ್ಲಿ ಅಗತ್ಯ ನೇಮಕಾತಿ, ವಾರದಲ್ಲಿ ಐದು ದಿನ ಮಾತ್ರ ಬ್ಯಾಂಕಿಂಗ್ ವ್ಯವಸ್ಥೆ ಜಾರಿ, ಬ್ಯಾಂಕಿಂಗ್ ಸೇವೆ ಹೊರಗುತ್ತಿಗೆ ನೀಡದಂತೆ ಹಾಗೂ ಇನ್ನಿತರ ಪ್ರಮುಖ ಬೇಡಿಕೆ ಮುಂದಿಟ್ಟು ಬ್ಯಾಂಕ್ ಕಾರ್ಮಿಕರ ಸಂಘಟನೆಗಳ ಸಂಯುಕ್ತ ವೇದಿಕೆ (ಯುಎಫ್ಬಿಯು) ಮಾ.24 ಮತ್ತು ಮಾ.25ರಂದು ಅಖಿಲ ಭಾರತ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿದೆ ಎಂದು ಸಂಘಟನೆಯ ಪ್ರತಿನಿಧಿ ಹಾಗೂ ಯೂನಿಯನ್ ಬ್ಯಾಂಕ್ನ ಮೆನೇಜರ್ ಮುರಳೀಧರ್ ತಿಳಿಸಿದರು.
ಮುಷ್ಕರಕ್ಕೆ ಪೂರ್ವಭಾವಿಯಾಗಿ ಉಡುಪಿಯ ಕೆನರಾ ಬ್ಯಾಂಕ್ನ ಕ್ಯಾಥೊಲಿಕ್ ಶಾಖೆಯ ಮುಂಭಾಗದಲ್ಲಿ ವಿವಿಧ ಬ್ಯಾಂಕ್ಗಳ ಮೆನೇಜರ್, ನೌಕರರು ಹಾಗೂ ಸಿಬ್ಬಂದಿ ಶುಕ್ರವಾರ ಸಂಜೆ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.
ಬ್ಯಾಂಕ್ ಆಫ್ ಬರೋಡಾದ ನೌಕರರ ಸಂಘದ ಕಾರ್ಯದರ್ಶಿ ನೇಹಾ ಮಾತನಾಡಿ, ಮುಷ್ಕರದ ದಿನದಂದು ಹೆಚ್ಚಿನ ಸಂಖ್ಯೆಯಲ್ಲಿ ನೌಕರರು ಪಾಲ್ಗೊಳ್ಳುವಂತಾಗಬೇಕು. ಆ ನಿಟ್ಟಿನಲ್ಲಿ ಕೆನರಾ ಬ್ಯಾಂಕ್ ಸೇರಿದಂತೆ ಎಲ್ಲ ಬ್ಯಾಂಕ್ಗಳ ನೌಕರರು, ಅಧಿಕಾರಿಗಳು ಹಾಗೂ ಸಿಬ್ಬಂದಿ ಸಾಂಕೇತಿಕವಾಗಿ ಇಂದು ಪ್ರತಿಭಟನೆಯ ಮೂಲಕ ಬಲ ಪ್ರದರ್ಶನ ಹಮ್ಮಿಕೊಂಡಿದ್ದೇವೆ ಎಂದರು.
ಸಂಘಟನೆಯ ಸದಸ್ಯರಾದ ರಮೇಶ್ ಕೆ. ಸಚಿನ್ ಶೆಟ್ಟಿ, ಸುಪ್ರಿಯಾ, ಮಂಜುನಾಥ್, ಗೋಪಾಲ್, ರವಿ ಅಬ್ರಾವತ್, ರಾಮಾನಂದ ಪೈ, ಸೂರಜ್ ಶೆಟ್ಟಿ, ಸೂರಜ್ ಉಪ್ಪೂರು, ಮಾರಿಯೋ ಮತಾಯಸ್, ನಾಗೇಶ್ ನಾಯಕ್, ಪ್ರೇಮನಾಥ್ ಪೂಜಾರಿ ಇತರರಿದ್ದರು.