

ಕೊಳ್ಳೇಗಾಲ: ಚರಂಡಿ ನೀರು ಹಾಗೂ ಮಳೆಯ ನೀರು ಕೊಟ್ಟಿಗೆಗೆ ನುಗ್ಗುತ್ತಿರುವುದರಿಂದ ದನಕರುಗಳಿಗೆ ತೊಂದರೆ ಆಗುತ್ತಿದೆ ಎಂದು ಆಕ್ರೋಶಗೊಂಡ ಡೇರಿ ಅಧ್ಯಕ್ಷ ಪ್ರಭುಸ್ವಾಮಿ ಶನಿವಾರ ಕುಂತೂರು ಗ್ರಾಪಂ ಕಚೇರಿ ಗೇಟಿಗೆ ಜಾನುವಾರುಗಳನ್ನು ಕಟ್ಟಿ ಪ್ರತಿಭಟಿಸಿದರು.
ಈ ವೇಳೆ ಮಾತನಾಡಿದ ಅವರು, ಮನೆಯ ಮುಂದೆ ಚರಂಡಿ ಹಾದುಹೋಗಿದೆ. ಚರಂಡಿ ಶಿಥಿಲವಾಗಿರುವ ಕಾರಣ ಮಳೆ ಬಂದಗೆಲ್ಲ ಕೊಳಚೆ ನೀರು ಕೊಟ್ಟಿಗೆಗೆ ನುಗ್ಗುತ್ತದೆ. ಈ ಬಗ್ಗೆ ಕುಂತೂರು ಗ್ರಾಮ ಪಂಚಾಯಿತಿ ಆಡಳಿತದ ಗಮನ ಸೆಳೆದರೂ ಪ್ರಯೋಜನವಾಗಿರಲಿಲ್ಲ. ಶುಕ್ರವಾರ ರಾತ್ರಿ ಸುರಿದ ಮಳೆಗೆ ಕೊಟ್ಟಿಗೆ ತುಂಬಿ ಕೊಳಚೆ ನೀರು ನುಗ್ಗಿ ಸಮಸ್ಯೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಷಯ ತಿಳಿದ ಪಿಡಿಒ ಮಲ್ಲೇಶ್ ದೂರವಾಣಿ ಮೂಲಕ ಪ್ರಭುಸ್ವಾಮಿ ಅವರನ್ನು ಸಂಪರ್ಕಿಸಿ, ಕೂಡಲೇ ಕೊಟ್ಟಿಗೆಗೆ ಚರಂಡಿ ನೀರು ಬಾರದಂತೆ ಕ್ರಮ ವಹಿಸಲಾಗುತ್ತದೆ ಎಂದು ಭರವಸೆ ನೀಡಿದರು. ಬಳಿಕ ಪ್ರಭುಸ್ವಾಮಿಗೆ ಕಚೇರಿ ಗೇಟಿಗೆ ಕಟ್ಟಿದ್ದ ಮೂರು ಹಸುಗಳನ್ನು ಬಿಚ್ಚಿಕೊಂಡು ಮನೆಗೆ ತೆರಳಿದರು.