

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದ ಕುಲಸಚಿವ ಕಚೇರಿ ಮುಂಭಾಗಕ್ಕೆ ಗರಿ, ಗರಿ ನೋಟಿನ ತೋರಣ ಕಟ್ಟುವ ಮೂಲಕ ವಿಭಿನ್ನವಾಗಿ ಪ್ರತಿಭಟನೆ ನಡೆಸಿದ ನೌಕರರು, ಕುಲಸಚಿವ ಪ್ರೊ.ಕೆ.ಬಿ.ಪ್ರವೀಣ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕಚೇರಿ ಬಾಗಿಲಿಗೆ ಕಟ್ಟಿದ ನೋಟಿನ ತೋರಣದಡಿಯಲ್ಲಿ ಕುಳಿತ ಮುಕ್ತ ವಿಶ್ವ ವಿದ್ಯಾಲಯದ ಕಾಯಂ ನೌಕರರ ಸಂಘದ ಸದಸ್ಯರು, ಸಿಬ್ಬಂದಿ ವರ್ಗಾವಣೆ, ಪದನಾಮ ಬದಲಾವಣೆ, ಪದೋನ್ನತಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕುಲಸಚಿವರ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟಿಸಿದರು.
ಕೆಎಸ್‌ಒಯು ಆಡಳಿತ ಮಂಡಳಿ ಕೈಗೊಂಡಿರುವ ಕೆಲವೊಂದು ಕ್ರಮ, ನಿರ್ಣಯಗಳಿಂದ ವಿಶ್ವವಿದ್ಯಾನಿಲಯ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಮಾರಕವಾಗಿದೆ. ವಿವಿಗೆ ಮಂಜೂರಾಗಿರುವ ಬೋಧಕ ಮತ್ತು ಬೋಧಕೇತರರ ಹುದ್ದೆಗಳಿಗಿಂತಲೂ ಹೆಚ್ಚು ಹಾಗೂ ನಿಯಮ ಉಲ್ಲಂಘಿಸಿ ತಾತ್ಕಾಲಿಕವಾಗಿ ಸಿಬ್ಬಂದಿ ನೇಮಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.
ಈಗ ನಡೆಯುತ್ತಿರುವ ತಾತ್ಕಾಲಿಕ ಸಿಬ್ಬಂದಿ ನೇಮಕವನ್ನು ಕೂಡಲೇ ಸಂಪೂರ್ಣವಾಗಿ ಸ್ಥಗಿತಗೊಳಿಸಬೇಕಿದೆ. ವಿಶ್ವವಿದ್ಯಾನಿಲಯ ಪ್ರಾದೇಶಿಕ, ಜಿಲ್ಲಾ ಕೇಂದ್ರಗಳ ವ್ಯಾಪ್ತಿಗೆ ಮಾತ್ರ ಸೀಮಿತಗೊಳಿಸುವುದು. ಆದರೆ, ತಾಲೂಕು, ಗ್ರಾಮಗಳ ಮಟ್ಟದಲ್ಲಿ ಪ್ರಾರಂಭಿಸಿರುವ ಪ್ರಾದೇಶಿಕ ಕೇಂದ್ರಗಳನ್ನು ಮುಚ್ಚಲು ಕ್ರಮ ವಹಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಕೆಲ ವರ್ಷಗಳಿಂದ ವಿವಿಯ ಎಲ್ಲ ವರ್ಗದ ಸಿಬ್ಬಂದಿಗೆ ಆರ್ಥಿಕ ಅಭದ್ರತೆ ಕಾಡುತ್ತಿರುವ ಹಿನ್ನೆಲೆಯಲ್ಲಿ ಕಳೆದ 5 ವರ್ಷಗಳ ಜಮಾ ಖರ್ಚಿನ ಅಂಕಿ ಅಂಶಗಳನ್ನು ಬ್ಯಾಂಕಿನ ಹೆಸರಿನೊಂದಿಗೆ ಒದಗಿಸಿ, ವಿವಿಯ ವೇತನ ಮತ್ತು ಪಿಂಚಣಿಗೆ ವಿವಿಧ ಬ್ಯಾಂಕ್‌ಗಳಲ್ಲಿ ಠೇವಣಿ ಇಟ್ಟಿರುವ ಹಣದ ಮಾಹಿತಿ ಬಿಡುಗಡೆಗೊಳಿಸಿ ಎಂದು ಒತ್ತಾಯಿಸಿದರು.
ವಿಶ್ವವಿದ್ಯಾನಿಲಯದಲ್ಲಿ ನಿಗದಿಪಡಿಸಲಾಗಿರುವ ಪ್ರತ್ಯೇಕ ವೇತನ ಮತ್ತು ಪಿಂಚಣಿ ನಿಧಿಗಳನ್ನು ಯಾವುದೇ ಸಂದರ್ಭದಲ್ಲೂ ಇತರೆ ವೆಚ್ಚಗಳಿಗೆ ಬಳಕೆ ಮಾಡದಂತೆ ತುರ್ತಾಗಿ ಪರಿನಿಯಮ ರಚಿಸಿ, ವಿವಿಯಲ್ಲಿ ಯಾವುದೇ ಕಟ್ಟಡ ಕಾಮಗಾರಿ, ಹೊಸ ಯೋಜನೆ ಪ್ರಾರಂಭಿಸಿದೆ ಸ್ಥಗಿತಗೊಳಿಸುವಂತೆ ಆಗ್ರಹಿಸಿದರು. ಸಂಘದ ಅಧ್ಯಕ್ಷ ಎಸ್.ಎನ್.ಸತೀಶ್, ಉಪಾಧ್ಯಕ್ಷ ನಾಗೇಂದ್ರ, ಕಾರ್ಯದರ್ಶಿ ಎನ್.ಪ್ರದೀಪ್‌ಗಿರಿ, ಪ್ರಮುಖರಾದ ಟಿ.ರವೀಂದ್ರ, ಗೀತಾ, ಸಿ.ಎಂ.ಕೃಷ್ಣೇಗೌಡ, ಬಸವರಾಜು, ಎಚ್.ಎಂ.ನಾಗರಾಜ ಮೂರ್ತಿ ಇತರರು ಇದ್ದರು.
ನೇಮಕ ಕ್ರಮಬದ್ಧ
ಯಾವುದೇ ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಿಸುತ್ತಿಲ್ಲ. ನೇಮಕಾತಿ ಕ್ರಮಬದ್ಧವಾಗಿಯೇ ಆಗಿದೆ. ಯಾವುದೇ ಅಕ್ರಮ ಎಸಗಿಲ್ಲ. ಅಕ್ರಮ ಕುರಿತು ಯಾವುದೇ ದೂರು ಬಂದಿಲ್ಲ. ಸಿಬ್ಬಂದಿ ಸ್ಥಳ ಬದಲಾವಣೆ ಗೊಂದಲ ಉಂಟು ಮಾಡಿತ್ತು. ಈಗ ಸರಿ ಪಡಿಸಿದ್ದೇವೆ ಎಂದು ಕುಲಸಚಿವ ಕೆ.ಬಿ ಪ್ರವೀಣ್ ಸ್ಪಷ್ಟನೆ ನೀಡಿದರು.